ವೃತ್ತಿಪರ ಕೋರ್ಸುಗಳಿಗೆ ಸಿಇಟಿ ಪರೀಕ್ಷೆ ಬರೆದಿದ್ದರೂ ವಿಶೇಷ ಪ್ರವರ್ಗಗಳ ಪ್ರಮಾಣಪತ್ರ ಮತ್ತು ಸಂಬಂಧಿತ ದಾಖಲೆಗಳನ್ನು ಇದುವರೆಗೆ ಸಲ್ಲಿಸದೆ ಇರುವ ಅಭ್ಯರ್ಥಿಗಳು ಜೂನ್ 2 ಅಥವಾ 6ರಂದು ಖುದ್ದಾಗಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರಕ್ಕೆ ಭೇಟಿ ನೀಡಿ, ಇವುಗಳನ್ನು ಸಲ್ಲಿಸಲು ಕಾಲಾವಕಾಶ ಕೊಡಲಾಗಿದೆ.
ಜೊತೆಗೆ ರಾಜ್ಯ ಪಠ್ಯಕ್ರಮ ಹೊರತುಪಡಿಸಿ ಬೇರೆಬೇರೆ ಪಠ್ಯಕ್ರಮಗಳಡಿಯಲ್ಲಿ 2023ರಲ್ಲಿ 12ನೇ ತರಗತಿ ಉತ್ತೀರ್ಣರಾಗಿದ್ದು, ಇದುವರೆಗೂ ತಮ್ಮ ಅಂಕಗಳ ವಿವರ ದಾಖಲಿಸದೆ ಇರುವವರಿಗೆ ಅನುಕೂಲವಾಗಲೆಂದು ಜೂನ್ 3ರ ಸಂಜೆ 4 ಗಂಟೆಯಿಂದ ಜೂನ್ 6ರ ಸಂಜೆ 5.30ರವರೆಗೆ ಮತ್ತೊಮ್ಮೆ ಪ್ರಾಧಿಕಾರದ ಪೋರ್ಟಲ್ ತೆರೆಯಲಾಗುತ್ತಿದೆ.ಪ್ರಾಧಿಕಾರದ ಕಾರ್ಯ ನಿರ್ವಾಹಕ ನಿರ್ದೇಶಕಿ ಎಸ್.ರಮ್ಯಾ ಗುರುವಾರ ಈ ಬಗ್ಗೆ ಪತ್ರಿಕಾ ಪ್ರಕಟಣೆ ನೀಡಿದ್ದು, ವಿಶೇಷ ಪ್ರವರ್ಗಗಳ ಪ್ರಮಾಣಪತ್ರ/ದಾಖಲೆಗಳ ಸಲ್ಲಿಕೆಗೆ ಮೇ 25ರಿಂದ ಜೂನ್ 1ರವರೆಗೆ ಅವಕಾಶ ಕೊಡಲಾಗಿತ್ತು. ಆದರೂ ಕೆಲವು ಅಭ್ಯರ್ಥಿಗಳನ್ನು ಈ ಅಗತ್ಯ ಪೂರೈಸಿಲ್ಲ. ಹಾಗೆಯೇ ಸಿಬಿಎಸ್‌ಇ, ಸಿಐಎಸ್‌ಸಿಇ, 10+2, ಐಜಿಸಿಎಸ್‌ಇ ಮತ್ತಿತರ ಪಠ್ಯಕ್ರಮಗಳಲ್ಲಿ 12ನೇ ತರಗತಿ ಉತ್ತೀರ್ಣರಾಗಿರುವವರಿಗೆ ಅಂಕಗಳ ವಿವರ ತುಂಬಲು ಮೇ 31ರವರೆಗೆ ಅವಕಾಶ ಕೊಡಲಾಗಿತ್ತು. ಈಗ ಇದನ್ನು ಮತ್ತೊಮ್ಮೆ ವಿಸ್ತರಿಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ. ಹೆಚ್ಚಿನ ವಿವರಗಳಿಗೆ ಪ್ರಾಧಿಕಾರದ ಜಾಲತಾಣ http://kea.kae.nic.in ನೋಡಬಹುದು.