ಬೆಂಗಳೂರು: ಸಿದ್ದರಾಮಯ್ಯನವರು ಈಗ ಸಿಕ್ಕಿಬಿದ್ದಿದ್ದಾರೆ. ಜಗ್ಗೋಲ್ಲ; ಬಗ್ಗೋಲ್ಲ; ಏನೇ ಬಂದ್ರೂ ಎದುರಿಸ್ತೀನಿ ಎಂದವರು ನಿನ್ನೆ ಕತ್ತಲಾದ ಮೇಲೆ ಜಗ್ಗಿದ್ಯಾಕೆ? ಬಗ್ಗಿದ್ಯಾಕೆ? ರಾತ್ರೋರಾತ್ರಿ ಜಗ್ಗಿದ್ದು, ಬಗ್ಗಿದ್ದು ಯಾಕೆ? ಎಂದು ವಿಧಾನಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಅವರು ಪ್ರಶ್ನಿಸಿದರು.
ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಇಂದು ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಅವರು, ಇದರಿಂದ ಅವರ ಕಪಟತನ ಎಂಥದ್ದೆಂದು ಅರ್ಥವಾಗುತ್ತದೆ. ನಿನ್ನೆ 14 ಸೈಟ್ ಸರೆಂಡರ್ ಮಾಡಿದ್ದಾಗಿ ಲೆಟರ್ ಕೊಟ್ಟಿದ್ದಾರೆ. ಆ ಪತ್ರದಲ್ಲಿ ದಿನಾಂಕವೂ ಇಲ್ಲ; ಆದ್ದರಿಂದ ಅದು ಖಾತ್ರಿಯೇನಲ್ಲ ಎಂದು ತಿಳಿಸಿದರು.
ಇವರು ಜಗ್ಗಿದ ಮೇಲೆ ಬಾಬಾಸಾಹೇಬ ಅಂಬೇಡ್ಕರ್ ಅವರು ಬರೆದ ಸಂವಿಧಾನಕ್ಕೆ ನಿಜವಾಗಿಯೂ ಗೌರವ ಸಿಕ್ಕಿದೆ. ಯಾರೂ ಕೂಡ ಈ ರೀತಿ ಉದ್ಧಟತನ ಪ್ರದರ್ಶನ ಮಾಡಬಾರದು ಎಂದು ನುಡಿದರು. ಕಳೆದ ಬಾರಿ ಅವರ ಅಧಿಕಾರಾವಧಿಯಲ್ಲಿ ಮುಖ್ಯಮಂತ್ರಿ ಆಗಿದ್ದಾಗ ಕಳವಾಗಿದ್ದ ಹುಬ್ಲೋಟ್ ವಾಚ್ ವಿಚಾರ ಬಂದಿತ್ತು. ಅದೊಂದು ಹಗರಣವಾಗಿತ್ತು. ಅದು ದುಡ್ಡು ಕೊಟ್ಟು ಕೊಂಡದ್ದೆಂದು ಮೊದಲು ಹೇಳಿದ್ದರು. ಸ್ವಲ್ಪ ದಿನದ ಬಳಿಕ ಸ್ನೇಹಿತರಿಂದ ಉಡುಗೊರೆ ಎಂದಿದ್ದರು. ನಂತರ ಕಳವು ಮಾಲೆಂದು ಗೊತ್ತಾಗಿತ್ತು. ಇದರಿಂದ ಕಷ್ಟ ಅನುಭವಿಸಬೇಕಾಗಬಹುದೆಂದು ಅದನ್ನು ಸರೆಂಡರ್ ಮಾಡಿದ್ದರು ಎಂದು ವಿವರಿಸಿದರು.
ಕದ್ದ ಮಾಲನ್ನು ವಿಧಾನಸೌಧದಲ್ಲಿ ಸರೆಂಡರ್ ಮಾಡಿದ್ದು ಸರಿಯೇ? ಪೊಲೀಸರಿಗೆ ಕೊಡಬೇಕಿತ್ತಲ್ಲವೇ? ಎಂದು ಕೇಳಿದರು. ಎಸ್‍ಇಪಿ, ಎಸ್‍ಟಿಪಿ ಹಣ ದುರುಪಯೋಗ ಮಾಡಿದರು. ಪ್ರತಿಭಟನೆ ನಡೆದು ಮುಜುಗರ ಅನುಭವಿಸಬೇಕಾದ ಸಂದರ್ಭದಲ್ಲಿ, ಪ್ರಜಾಪ್ರಭುತ್ವ ದಿನದಂದು ನಾನೊಂದು ತಪ್ಪು ಮಾಡಿದೆ. ಅನ್ಯ ಉದ್ದೇಶಕ್ಕೆ ಪರಿಶಿಷ್ಟ ಸಮುದಾಯದ ಹಣ ಬಳಸಬಾರದಿತ್ತು ಎಂದಿದ್ದರು ಎಂದು ಗಮನ ಸೆಳೆದರು. ಅಲ್ಲಿಗೆ ಅವೆರಡರಿಂದ ತಪ್ಪಿಸಿಕೊಂಡರು ಎಂದರು.