ಜನರ ಶ್ರೇಯಸ್ಸಿಗಾಗಿ ಚಂಡಿಕಾ ಹೋಮ

ಬುಧವಾರ, 24 ಅಕ್ಟೋಬರ್ 2018 (23:16 IST)
ಶಕ್ತಿದೇವತೆಯ ನೆಲೆವೀಡಾಗಿರೋ ಹೊರನಾಡಿನಲ್ಲಿ ಸಂಭ್ರಮ ಸಡಗರ ಮೇಳೈಸಿತ್ತು. ನವರಾತ್ರಿಯ ಕೊನೆಯ ದಿನ ದ್ವಾದಶಿಯಾಗಿದ್ದು, ಕ್ಷೇತ್ರದಲ್ಲಿ ಮಹಾಚಂಡಿಕಾಯಾಗ ನೆರವೇರಿತು. ಲೋಕಕಲ್ಯಾಣಾರ್ಥವಾಗಿ ನಡೆದ ಈ ಪವಿತ್ರ ಕಾರ್ಯವನ್ನು ಕಣ್ತುಂಬಿಕೊಳ್ಳಲು ಅನ್ನಪೂರ್ಣೇಶ್ವರಿಯ ಬೀದಿಗೆ ಭಕ್ತರ ದಂಡೇ ಹರಿದು ಬಂದಿತ್ತು.

11 ದಿನಗಳ ಕಾಲ ನಡೆದ ನವರಾತ್ರಿ ಉತ್ಸವಕ್ಕೆ ಹೊರನಾಡಿನಲ್ಲಿ ವಿದ್ಯುಕ್ತ ತೆರೆ ಬಿದ್ದಿದೆ. ರಾಜ್ಯದ ಪ್ರಮುಖ ಧಾರ್ಮಿಕ ಕ್ಷೇತ್ರವಾಗಿರೋ ಹೊರನಾಡಿನಲ್ಲಿ 11 ದಿನಗಳ ಕಾಲ ನವರಾತ್ರಿಯನ್ನು ಅದ್ದೂರಿಯಾಗಿ ಶ್ರದ್ದಾಭಕ್ತಿಯಿಂದ ಆಚರಿಸಲಾಯಿತು.

ನಿತ್ಯವೂ ಅನ್ನಪೂರ್ಣೇಶ್ವರಿಯನ್ನು ವಿವಿಧ ಅಲಂಕಾರಗಳಿಂದ ಸಿಂಗರಿಸಲಾಗಿತ್ತು. ಕೊನೆಯ ದಿನ ದ್ವಾದಶಿಯಾಗಿದ್ದು ಕ್ಷೇತ್ರದಲ್ಲಿ ಲೋಕಕಲ್ಯಾಣಾರ್ಥವಾಗಿ ಮಹಾಚಂಡಿಕಾ ಹೋಮವನ್ನು ನಡೆಸಲಾಯಿತು. ಋತ್ವಿಜರು ಸಾಮೂಹಿಕವಾಗಿ ಧಾರ್ಮಿಕ ಕೈಂಕರ್ಯಗಳೊಂದಿಗೆ ಚಂಡಿಕಾ ಹೋಮವನ್ನು ನೆರವೇರಿಸಿದರು. ಮಹಾಚಂಡಿಕಾ ಹೋಮವನ್ನು ನಡಿಸೋದ್ರಿಂದ ಜಗತ್ತಿನೆಲ್ಲೆಡೆ ಸಮೃದ್ದಿ, ಸಂರಕ್ಷಣೆ ನೆಲೆಸಲಿದೆ ಅನ್ನೋ ನಂಬಿಕೆ ಭಕ್ತರಲ್ಲಿದೆ. ಈ ಹಿನ್ನೆಲೆಯಲ್ಲಿ ಕ್ಷೇತ್ರದಲ್ಲಿ ವರ್ಷಂಪ್ರತಿ ದ್ವಾದಶಿಯಂದು ಮಹಾಚಂಡಿಕಾ ಹೋಮವನ್ನು ನಡೆಸಲಾಗುತ್ತೇ ಅಂತಾರೆ ಧರ್ಮಕರ್ತರು.

ಮಹಾಚಂಡಿಕಾ ಹೋಮದ ಪ್ರಯುಕ್ತ ಆದಿಶಕ್ತ್ಯಾತ್ಮಕ ಅನ್ನಪೂರ್ಣೇಶ್ವರಿಯನ್ನು ಬಗೆಬಗೆಯ ಹೂವುಗಳಿಂದ ಸಿಂಗರಿಸಲಾಗಿತ್ತು. ಅನ್ನದಾತೆಗೆ ಹೋಮದ ಪ್ರಯುಕ್ತ ವಿಶೇಷ ಪೂಜೆ, ಅಭಿಷೇಕ, ಅರ್ಚನೆಯನ್ನು ನೆರವೇರಿಸಲಾಯಿತು. ದೇಗುಲದಲ್ಲಿ ಲೋಕಕಲ್ಯಾಣಾರ್ಥವಾಗಿ ನಡೆದ ಈ ಮಹಾಚಂಡಿಕಾ ಹೋಮದಲ್ಲಿ ಧರ್ಮದರ್ಶಿ ಕುಟುಂಬ ಹಾಗೂ ಭಕ್ತರು ಪಾಲ್ಗೊಂಡಿದ್ದರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ