ಚನ್ನಪಟ್ಟಣದಲ್ಲಿ ಕಾವೇರುತ್ತಿದೆ ಬೈ ಎಲೆಕ್ಷನ್: ಎನ್‌ಡಿಎ ಮೈತ್ರಿಗೆ ತಲೆನೋವಾದ ಬಿಜೆಪಿಯ 'ಸೈನಿಕ'

Sampriya

ಸೋಮವಾರ, 12 ಆಗಸ್ಟ್ 2024 (17:46 IST)
Photo Courtesy X
ಬೆಂಗಳೂರು: ಎಚ್‌ ಡಿ ಕುಮಾರಸ್ವಾಮಿ ರಾಜೀನಾಮೆಯಿಂದ ತೆರವಾದ ಚನ್ನಪ್ಪಟ್ಟಣ ವಿಧಾನ ಸಭಾ ಕ್ಷೇತ್ರದ ಉಪ ಚುನಾವಣೆಗೆ ದಿನಾಂಕ ಘೋಷಣೆ ಆಗುವ ಮುನ್ನಾವೇ ರಾಜಕೀಯ ಚಟುವಟಿಕೆ ಗರಿಗೆದರಿದೆ. ಮೂರು ಪಕ್ಷಗಳಲ್ಲೂ ಟಿಕೆಟ್‌ಗಾಗಿ ತೆರೆಮರೆಯಲ್ಲಿ ಕಸರತ್ತು ಜೋರಾಗಿದೆ.

ಒಕ್ಕಲಿಗ ಪ್ರಬಲ ನಾಯಕರಿಬ್ಬರ ನಡುವಿನ ಪ್ರತಿಷ್ಠೆಯ ಕಣವಾಗಿರುವ ಚನ್ನಪಟ್ಟಣ ಉಪ ಚುನಾವಣೆಯ ಟಿಕೆಟ್ ವಿಚಾರ ಎನ್ ಡಿಎ ಮಿತ್ರಪಕ್ಷಗಳಾದ ಬಿಜೆಪಿ ಮತ್ತು ಜೆಡಿಎಸ್‌ನಲ್ಲಿ ತೆರೆಮೆರೆಯಲ್ಲಿ ಲೆಕ್ಕಾಚಾರ ಜೋರಾಗಿ ನಡೆಯುತ್ತಿದೆ.

ಎನ್​ಡಿಎ ಅಭ್ಯರ್ಥಿಯಾಗಿಯೇ ನಾನು ಕಣಕ್ಕಿಳಿಯುತ್ತೇನೆ ಎಂದು ಹಠ ಹಿಡಿದಿರುವ ಸಿಪಿ ಯೋಗೇಶ್ವರ್ ಅವರು ಟಿಕೆಟ್ ಕೈ ತಪ್ಪಿದರೆ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಯುವುದಾಗಿ ಎಚ್ಚರಿಕೆ ನೀಡಿದ್ದಾರೆ. ಇದರಿಂದ ಎನ್‌ಡಿಎ ಮೈತ್ರಿಗೆ ಸಿಪಿ ಯೋಗೇಶ್ವರ್ ನಡೆ ತಲೆನೋವಾಗಿ ಪರಿಣಮಿಸಿದೆ.

ಇದರ ಬೆನ್ನಲ್ಲೇ ಯೋಗೇಶ್ವರ್ ಅವರನ್ನು ಬಿಜೆಪಿ ಹೈಕಮಾಂಡ್ ದೆಹಲಿಗೆ ಕರೆಸಿಕೊಂಡಿದೆ.  

ದೆಹಲಿಗೆ ತೆರಳುವ ಮುನ್ನಾ ಮಾತನಾಡಿದ ಸಿಪಿ ಯೋಗೇಶ್ವರ್, ನಾನು ಚನ್ನಪಟ್ಟಣ ಕ್ಷೇತ್ರದ ಪ್ರಬಲ ಟಿಕೆಟ್ ಆಕಾಂಕ್ಷಿಯಾಗಿದ್ದೇನೆ. ಎನ್‌ಡಿಎ ಅಭ್ಯರ್ಥಿಯಾಗಿ ಕಣಕ್ಕಿಳಿಯಬೇಕು ಎನ್ನುವ ಆಸೆ ಇದೆ. ಒಂದು ವೇಳೆ ಅದು ಸಾಧ್ಯ ವಾಗಿಲ್ಲ ಅಂದರೆ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಲು ನಿರ್ಧರಿಸಿದ್ದೇನೆ ಎಂದು ಹೇಳಿದರು.

ಕೇಂದ್ರ ಸಚಿವ ಎಚ್ ಡಿ ಕುಮಾರಸ್ವಾಮಿ ಅವರ ರಾಜೀನಾಮೆಯಿಂದ ತೆರವಾಗಿರುವ ಚನ್ನಪಟ್ಟಣಕ್ಕೆ ಉಪ ಚುನಾವಣೆ ಎದುರಾಗಿದೆ. ಈ ಚುನಾವಣೆ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಮತ್ತು ಎಚ್ ಡಿ ಕುಮಾರಸ್ವಾಮಿ ನಡುವಿನ ಪ್ರತಿಷ್ಠೆಯ ಕಣವಾಗಿ ಮಾರ್ಪಟ್ಟಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ