ಬೆಂಗಳೂರು: ಲೋಕಸಭೆ ಚುನಾವಣೆಗೆ ಮಾತ್ರ ಬಿಜೆಪಿ-ಜೆಡಿಎಸ್ ಮೈತ್ರಿ ಮಾಡಿಕೊಂಡಿದೆ ಎಂದು ಆಡಿಕೊಳ್ಳುವವರಿಗೆ ಮಾಜಿ ಸಿಎಂ ಕುಮಾರಸ್ವಾಮಿ ತಿರುಗೇಟು ನೀಡಿದ್ದಾರೆ.
ಲೋಕಸಭೆ ಸಂದರ್ಭದಲ್ಲಿ ಮಾಡಿಕೊಂಡಿರುವ ಈ ಮೈತ್ರಿ ತಾತ್ಕಾಲಿಕವಲ್ಲ. ಮುಂದೆಯೂ ಮುಂದುವರಿಯಲಿದೆ. ನಮ್ಮ ಎರಡೂ ಪಕ್ಷ ಒಂದಾದರೆ ರಾಜ್ಯದಲ್ಲಿ ಕಾಂಗ್ರೆಸ್ ಗೆಲುವ ಅಸಾಧ‍್ಯ ಎಂದಿದ್ದಾರೆ. ಇದೀಗ ಲೋಕಸಭೆ ಚುನಾವಣೆಯಲ್ಲಿ 3 ಕ್ಷೇತ್ರಗಳನ್ನು ಜೆಡಿಎಸ್ ಗೆ ಬಿಟ್ಟುಕೊಟ್ಟಿರುವ ಬಿಜೆಪಿ ಉಳಿದ 25 ಕ್ಷೇತ್ರಗಳಲ್ಲಿ ತಾನೇ ಕಣಕ್ಕಿಳಿಯುತ್ತಿದೆ.
ಬೆಂಗಳೂರಿನಲ್ಲಿ ಬಿಜೆಪಿ-ಜೆಡಿಎಸ್ ಸಮನ್ವಯ ಸಮಿತಿ ಸಭೆಯಲ್ಲಿ ಮಾತನಾಡಿದ ಕುಮಾರಸ್ವಾಮಿ ನಮ್ಮ ಈ ಮೈತ್ರಿ ಕೃತಕವಾಗಿ ಸೃಷ್ಟಿಯಾಗಿಲ್ಲ. ಹಿಂದಿನ ಸಮ್ಮಿಶ್ರ ಸರ್ಕಾರದಲ್ಲಿ ಯಡಿಯೂರಪ್ಪ ಸಹಕರಾದಿಂದ ಹಲವು ಒಳ್ಳೆಯ ಕೆಲಸಗಳಾಗಿವೆ. ಅದೇ ಮಾದರಿಯ ಸರ್ಕಾರ ಮತ್ತೆ ರಚನೆಯಾಗಬೇಕು ಎಂದರು.
ಕೇಂದ್ರದಲ್ಲಿ ನರೇಂದ್ರ ಮೋದಿ ನೇತೃತ್ವದಲ್ಲಿ ಮೂರನೇ ಬಾರಿಗೆ ಸರ್ಕಾರ ರಚನೆಯಾಗುವುದು ನೂರಕ್ಕೆ ನೂರು ಖಚಿತವಾಗಿದೆ. ನಮ್ಮ ಮೈತ್ರಿಯಿಂದ ಕಾಂಗ್ರೆಸ್ ಗೆ ರಾಜ್ಯದಲ್ಲಿ ನಡುಕ ಶುರುವಾಗಿದೆ. ನಮ್ಮ ಎರಡೂ ಪಕ್ಷಗಳೂ ಮುಂದಿನ ದಿನಗಳಲ್ಲೂ ಇದೇ ಮೈತ್ರಿ ಮುಂದುವರಿಸಿಕೊಂಡು ಹೋಗಬೇಕೆಂಬ ಅಭಿಪ್ರಾಯವಿದೆ ಎಂದಿದ್ದಾರೆ.