ಸಂಚಾರ ಪೊಲೀಸರು ರಾತ್ರಿ ಚೆಕ್ ಪೋಸ್ಟ್ ಹಾಕಿ, ಚಾಲಕರಿಗೆ ನಡುರಸ್ತೆಯಲ್ಲೇ ಸಂಚಾರ ನಿಯಮಗಳ ಬಗ್ಗೆ ಪಾಠ ಮಾಡುತ್ತಿದ್ದಾರೆ. ಲಾರಿ ಮೇಲೆ ದಾಖಲಾಗಿರುವ ಹಳೇ ಪ್ರಕರಣಗಳನ್ನು ನೋಡಿ ದಂಡ ವಸೂಲು ಮಾಡಿದ್ದಾರೆ. ಜೊತೆಗೆ ಲಾರಿ ಚಾಲಕರ ವಿರುದ್ಧವೂ ಪ್ರಕರಣ ದಾಖಲಿಸಿ ಎಚ್ಚರಿಕೆ ನೀಡುತ್ತಿದ್ದಾರೆ. ಸರಕು ಕೊಂಡೊಯ್ಯುವ ಚಾಲಕರು ಎಂಥ ತುರ್ತು ಪರಿಸ್ಥಿತಿ ಇದ್ದರೂ ಟ್ರಾಫಿಕ್ ಇನ್ಸ್ಪೆಕ್ಟರ್ಗಳ ಪಾಠ ಕೇಳಿಯೇ ಹೋಗಬೇಕು. ಪ್ರತಿದಿನ ಮೂವತ್ತಕ್ಕೂ ಹೆಚ್ಚು ಚಾಲಕರಿಗೆ ತರಬೇತಿ ನೀಡುತ್ತಿರುವ ಸಂಚಾರ ಪೊಲೀಸರು ಅಗತ್ಯ ಸಂದರ್ಭಗಳಲ್ಲಿ ಲಾರಿ ಮಾಲೀಕರನ್ನು ಸ್ಥಳಕ್ಕೆ ಕರೆಸಿ ಎಚ್ಚರಿಕೆ ನೀಡುತ್ತಿದ್ದಾರೆ.
ಜಾಗೃತಿ ಅಭಿಯಾನ ಹಿನ್ನೆಲೆಯಲ್ಲಿ ಮಡಿವಾಳದಲ್ಲಿ ಟಿಪ್ಪರ್ ಲಾರಿಗಳನ್ನು ವಶಕ್ಕೆ ಪಡೆದು ಎಲ್ಲಾ ಚಾಲಕರಿಗೆ ಸಂಚಾರ ನಿಯಮಗಳ ಬಗ್ಗೆ ಪೊಲೀಸರು ಪಾಠ ಮಾಡಿದ್ದಾರೆ. ಹೀಗೆ ತರಬೇತಿ ಪಡೆದ ಚಾಲಕರು ಮತ್ತೊಮ್ಮೆ ಅತಿವೇಗ, ಅಜಾಗರೂಕ ಚಾಲನೆ ಮಾಡಿ, ಅಪಘಾತ ಸಂಭವಿಸಿದರೆ, ಅಂಥವರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಲಾಗುವುದು ಎಂದು ಎಚ್ಚರಿಸಲಾಗಿದೆ. ಹಿರಿಯ ಅಧಿಕಾರಿಗಳ ಸೂಚನೆ ಹಿನ್ನಲೆಯಲ್ಲಿ ನಗರದ ಹಲವೆಡೆ ನಾಕಾಬಂದಿ ಹಾಕಿ ಬಿಬಿಎಂಪಿ ಕಸದ ಲಾರಿ ಚಾಲಕರಿಗೂ ಸಂಚಾರ ಪೊಲೀಸರು ಕ್ಲಾಸ್ ಮಾಡುತ್ತಿದ್ದಾರೆ.
ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಲಾರಿ ಚಾಲಕರಿಂದ ಅತಿಹೆಚ್ಚು ಅಪಘಾತಗಳು ವರದಿಯಾಗಿವೆ. ಒಂದೇ ವರ್ಷದಲ್ಲಿ 123 ಮಾರಣಾಂತಿಕ ಅಪಘಾತಗಳು ಸಂಭವಿಸಿವೆ. ಈ ಪೈಕಿ ಬಿಬಿಎಂಪಿ ಕಸದ ಲಾರಿಗಳಿಂದ ಹತ್ತಕ್ಕೂ ಹೆಚ್ಚು ಅಪಘಾತಗಳು ಸಂಭವಿಸಿವೆ.