ಆ.12ರಂದು ಕೃಷ್ಣೆಗೆ ಸಿಎಂ ಬಾಗಿನ

ಗುರುವಾರ, 9 ಆಗಸ್ಟ್ 2018 (13:51 IST)
ಸಂಪೂರ್ಣವಾಗಿ ಆಲಮಟ್ಟಿ ಜಲಾಶಯ ಭರ್ತಿಯಾಗಿದೆ. ಹೀಗಾಗಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿಯವರಿಂದ ಆಗಸ್ಟ್ 12ರಂದು ಕೃಷ್ಣೆಗೆ ಬಾಗಿನ ಅರ್ಪಣೆ ನಡೆಯಲಿದೆ. ಇದಕ್ಕಾಗಿ ಕೆ.ಬಿ.ಜೆ.ಎನ್‌.ಎಲ್‌. ನಿಂದ ಭರದ ಸಿದ್ಧತೆ ನಡೆದಿದೆ.

ವಿಜಯಪುರ ಜಿಲ್ಲೆಯ ಆಲಮಟ್ಟಿಯಲ್ಲಿನ  ಲಾಲ್‌ಬಹದ್ದೂರ್‌ ಶಾಸ್ತ್ರಿ ಸಾಗರ ಜಲಾಶಯಕ್ಕೆ ಶ್ರಾವಣದ ಮೊದಲ ದಿನವಾದ ಆಗಸ್ಟ್‌ 12ರಂದು ಮಧ್ಯಾಹ್ನ 3 ಗಂಟೆಗೆ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಬಾಗಿನ ಅರ್ಪಿಸಲಿದ್ದಾರೆ.
ಜಲಸಂಪನ್ಮೂಲ ಸಚಿವ ಡಿ.ಕೆ. ಶಿವಕುಮಾರ್‌, ಸಚಿವರಾದ ಶಿವಾನಂದ ಪಾಟೀಲ, ಎಂ.ಸಿ. ಮನಗೂಳಿ ಪಾಲ್ಗೊಳ್ಳಲಿದ್ದಾರೆ. ಬಾಗಿನ ಅರ್ಪಿಸುವ ಸಂಬಂಧ ಕೆ.ಬಿ.ಜೆ.ಎನ್.ಎಲ್ ವ್ಯವಸ್ಥಾಪಕ ನಿರ್ದೇಶಕ ಕಚೇರಿಗೆ ಮುಖ್ಯಮಂತ್ರಿ ಕಚೇರಿಯಿಂದ ಮಾಹಿತಿ ಬಂದಿದೆ. ಆಮಂತ್ರಣ ಪತ್ರಿಕೆ ಮುದ್ರಣ ಸೇರಿದಂತೆ ವಿವಿಧ ಸಿದ್ಧತೆ ಮಾಡಿಕೊಂಡಿದ್ದೇವೆ ಎಂದು ಅಣೆಕಟ್ಟು ವಲಯದ ಮುಖ್ಯ ಎಂಜಿನಿಯರ್ ಎಸ್.ಎಚ್. ಮಂಜಪ್ಪ ತಿಳಿಸಿದ್ದಾರೆ.

ಆಲಮಟ್ಟಿ ಜಲಾಶಯದಲ್ಲಿ 2002ರಿಂದ 2017ರವರೆಗೆ 519.60 ಮೀಟರ್‌ವರೆಗೆ ನೀರಿನ ಸಂಗ್ರಹ ಆರಂಭಗೊಂಡಿದೆ. ಎಸ್.ಎಂ. ಕೃಷ್ಣ ಮುಖ್ಯಮಂತ್ರಿಯಾಗಿದ್ದಾಗ, 2002ರಲ್ಲಿ ಬಾಗಿನ ಅರ್ಪಿಸುವ ಸಂಪ್ರದಾಯ ಆರಂಭಗೊಂಡಿದೆ. ಅಲ್ಲಿಂದ ಪ್ರತಿ ವರ್ಷ ಮುಖ್ಯಮಂತ್ರಿ ಕೃಷ್ಣೆಗೆ ಬಾಗಿನ ಅರ್ಪಿಸುತ್ತಾ ಬಂದಿದ್ದಾರೆ. 2015ರಲ್ಲಿ ಜಲಾಶಯ ಭರ್ತಿಯಾಗದ ಕಾರಣ, 2016ರಲ್ಲಿ ಆಗಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪುತ್ರ ರಾಕೇಶ್ ನಿಧನದ ಕಾರಣ ಎರಡು ಬಾರಿ ಕೃಷ್ಣೆಗೆ ಮುಖ್ಯಮಂತ್ರಿ ಬಾಗಿನ ಅರ್ಪಿಸಿಲ್ಲ.



 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ