ಮಹಾರಾಷ್ಟ್ರದಲ್ಲಿ ಪ್ರಧಾನಿ ಮೋದಿಗೆ ಮತ್ತೊಮ್ಮೆ ಸವಾಲೆಸದ ಸಿದ್ದರಾಮಯ್ಯ

Krishnaveni K

ಶನಿವಾರ, 16 ನವೆಂಬರ್ 2024 (16:11 IST)
ಮಂಗಳ್ ವೇಡ (ಮಹಾರಾಷ್ಟ್ರ): ಕಾಂಗ್ರೆಸ್ ಬಹುತ್ವದಲ್ಲಿ ನಂಬಿಕೆ ಇಟ್ಟು ಬಹುತ್ವವನ್ನು ಆಚರಿಸುವ ಏಕೈಕ ಪಕ್ಷ. ಕಾಂಗ್ರೆಸ್ ಮೂಲಕ ಬಹುತ್ವದ ಸಂಸ್ಕೃತಿಯನ್ನು ಉಳಿಸಲು ನಡೆಯುತ್ತಿರುವ ರಾಜಕೀಯ ಚಳವಳಿಯಲ್ಲಿ ನೀವೆಲ್ಲಾ ಒಟ್ಟಾಗಬೇಕು. ಕಾಂಗ್ರೆಸ್ ಗೆಲ್ಲಿಸಬೇಕು ಎಂದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕರೆ ನೀಡಿದರು.
 
ಮಹಾರಾಷ್ಟ್ರದ ಸೋಲಾಪುರ ಜಿಲ್ಲೆಯ ಪಂಡರಪುರ ಮಂಗಳ್ ವೇಡಾ ದಲ್ಲಿ ಮಹಾರಾಷ್ಟ್ರ ರಾಜ್ಯ ಕಾಂಗ್ರೆಸ್  ಆಯೋಜಿಸಿದ್ದ ಸಾರ್ವಜನಿಕ ಸಭೆಯಲ್ಲಿ ಬೃಹತ್ ಜನಸ್ತೋಮವನ್ನು ಉದ್ದೇಶಿಸಿ ಮಾತನಾಡಿದರು. 
 
ಪಂಡರಪುರ ಮಂಗಲ್ ವೇಡ ಪಾಂಡುರಂಗ, ವಿಠ್ಠಲ ಭಗವಾನ್ ಅವರ ಮೌಲ್ಯಗಳನ್ನು ಆಚರಿಸುವ  ಅತ್ಯಂತ ಪವಿತ್ರವಾದ ಸ್ಥಳ ಎಂದರು.
 
ಶರಣ ಬಸವೇಶ್ವರರು 14 ವರ್ಷ ಮಂತ್ರಿಯಾಗಿದ್ದ ಸ್ಥಳ ಪಂಡರಪುರ ಮಂಗಳ್ ವೇಡಾ.  
ಜಾತಿ ತಾರತಮ್ಯ ಹೋಗಲಾಡಿಸಲು, ಮನುಷ್ಯ ತಾರತಮ್ಯ ನಿವಾರಿಸಲು  ಬಸವೇಶ್ವರರು ಲಿಂಗಾಯತ ಧರ್ಮವನ್ನು ಸ್ಥಾಪಿಸಿದರು. ಇಂಥಾ ಪವಿತ್ರವಾದ ಸ್ಥಳದಲ್ಲಿ ಬಿಜೆಪಿ ಗೆಲ್ಲಬಾರದು ಎಂದರು. 
 
ಜವಾಹರಲಾಲ್ ಅವರಿಂದ ಮನ‌ಮೋಹನ್ ಸಿಂಗ್ ಅವರ ವರೆಗೂ ಕಾಂಗ್ರೆಸ್ಸಿನ ಎಲ್ಲಾ ಪ್ರಧಾನಿಗಳು ಅಂಬೇಡ್ಕರ್ ಅವರ ಆಶಯಕ್ಕೆ ತಕ್ಕಂತೆ ಸಾಮಾಜಿಕ ನ್ಯಾಯದ ಪರವಾಗಿ ಕಾರ್ಯಕ್ರಮಗಳನ್ನು ರೂಪಿಸಿ ಜಾರಿ ಮಾಡಿದ ಬಹುತ್ವದ ಚರಿತ್ರೆ ಹೊಂದಿದ್ದಾರೆ ಎಂದರು.‌
 
ದೇಶದಲ್ಲಿ ಬಡವರು ಮತ್ತು ಶ್ರೀಮಂತರ ನಡುವಿನ ಅಂತರ ಕಡಿಮೆ ಮಾಡುತ್ತಾ ಬಂದಿದ್ದು ಕಾಂಗ್ರೆಸ್. ಆದರೆ ಬಿಜೆಪಿ ಶ್ರೀಮಂತ ಮತ್ತು ಮೇಲ್ವರ್ಗದವರ ಪಕ್ಷವಾಗಿದ್ದು ಈ ಕಾರಣಕ್ಕೇ ಬಿಜೆಪಿ ಬಡವರ ಮತ್ತು ಶ್ರೀಮಂತರ ನಡುವಿನ ಅಂತರವನ್ನು ಹೆಚ್ಚಿಸುತ್ತಿದೆ ಎಂದು ಟೀಕಿಸಿದರು.
 
ಪ್ರಧಾನಿ ನರೇಂದ್ರ ಮೋದಿ ಕೇವಲ ಅಂಬಾನಿ ಅದಾನಿಯವರ ಸಂಪತ್ತು ಹೆಚ್ಚಿಸಲು ಕೆಲಸ ಮಾಡಿದರೇ ಹೊರತು ಬಡವರ, ರೈತರ, ಕಾರ್ಮಿಕರ, ಶ್ರಮಿಕರ ಬದುಕನ್ನು ಸುಧಾರಿಸಲು ಒಂದೇ ಒಂದು ಕಾರ್ಯಮವನ್ನೂ ರೂಪಿಸಲಿಲ್ಲ. ನಿಮ್ಮ ಮನೆ ಬಾಗಿಲಿಗೆ ತರಲಿಲ್ಲ. ಬದಲಿಗೆ ಪೆಟ್ರೋಲ್, ಡೀಸೆಲ್, ಗ್ಯಾಸ್, ಕಾಳು, ಬೇಳೆ ಎಲ್ಲದರ ಬೆಲೆ ಏರಿಸಿದರು.
 
ಅಚ್ಛೇ ದಿನ್ ಆಯೆಗಾ ಎಂದರು. ಕಹಾಂ ಹೈ ಅಚ್ಛೆ ದಿನ್ ? ಬೆಲೆ ಏರಿಕೆಗೆ ಬ್ರೇಕ್ ಹಾಕುವುದಾಗಿ ಭಾಷಣ ಮಾಡಿದರು. ಆದರೆ ಬೆಲೆ ಏರಿಕೆ ಮುಗಿಲು ಮುಟ್ಟಿದೆ ಎಂದರು.
 
ಭಾರತದ ರೈತರು ಸಾಲ ಮನ್ನಾ ಮಾಡಿ ಎಂದು ಮೋದಿಯವರಿಗೆ ಕೇಳಿದರೆ, ಈ ಮೋದಿ ಅವರು ರೈತರ ಒಂದೇ ಒಂದು ರೂಪಾಯಿ ಸಾಲ ಮನ್ನಾ ಮಾಡಲಿಲ್ಲ. ಬದಲಿಗೆ ಕಾರ್ಪೋರೇಟ್ ಶ್ರೀಮಂತರ 16 ಲಕ್ಷ ಕೋಟಿ ಸಾಲ ಮನ್ನಾ ಮಾಡಿದ್ದಾರೆ. ಆದರೆ ಕಾಂಗ್ರೆಸ್ ನ ಪ್ರಧಾನಮಂತ್ರಿ ಮನಮೋಹನ್ ಸಿಂಗ್ ಅವರು ಭಾರತದ ರೈತರ 76 ಸಾವಿರ ಕೋಟಿ ರೂಪಾಯಿ ಸಾಲ ಮನ್ನಾ ಮಾಡಿದ್ದರು. ನಾನು ಮೊದಲ ಬಾರಿ ಕರ್ನಾಟಕದ ಮುಖ್ಯಮಂತ್ರಿ ಆದಾಗ ರೈತರ ಸಾಲ ಮನ್ನಾ ಮಾಡಿದೆ. ಬಿಜೆಪಿಯವರಿಗೆ ರೈತರ ಸಾಲ ಮನ್ನಾ ಮಾಡಿ ಎಂದರೆ, ನಮ್ಮ ಬಳಿ ನೋಟು ಪ್ರಿಂಟ್ ಹಾಕುವ ಯಂತ್ರ ಇಲ್ಲ ಅಂದರು. ಹೌದು ಬಿಜೆಪಿಯವರ ಮನೆಯಲ್ಲಿ ಇರುವುದು ನೋಟು ಎಣಿಸುವ ಯಂತ್ರ ಮಾತ್ರ ಎಂದು ವ್ಯಂಗ್ಯವಾಡಿದರು. 
 
ಮಹಾರಾಷ್ಟ್ರದಲ್ಲಿ ಮೋದಿಗೆ ಮತ್ತೊಮ್ಮೆ ಸವಾಲೆಸೆದ ಸಿದ್ದರಾಮಯ್ಯ
 
ಸ್ವಾತಂತ್ರ್ಯ ಭಾರತದಲ್ಲಿ ಮೋದಿಯಷ್ಟು ಸುಳ್ಳು ಹೇಳುವ ಪ್ರಧಾನಿ ಹಿಂದೆಂದೂ ಬಂದಿರಲಿಲ್ಲ. ಮುಂದೆಯೂ ಬರೋದಿಲ್ಲ. 
 
ಅಬಕಾರಿ ಇಲಾಖೆಯಲ್ಲಿ 700 ಕೋಟಿ ಲಂಚ ಪಡೆದು ಮಹಾರಾಷ್ಟ್ರದಲ್ಲಿ ಕಾಂಗ್ರೆಸ್ ಚುನಾವಣೆ ನಡೆಸುತ್ತಿದೆ ಎನ್ನುವ ಹಸಿ ಹಸಿ ಸುಳ್ಳನ್ನು ಇದೇ ಮಹಾರಾಷ್ಟ್ರದಲ್ಲಿ ಮೋದಿ ಹೇಳಿದ್ದಾರೆ. ಮೋದಿಯವರೇ ನಾನು ನೀವು ಸುಳ್ಳು ಭಾಷಣ ಮಾಡಿದ ಮಹಾರಾಷ್ಟ್ರಕ್ಕೇ ಬಂದು ನಿಮಗೆ ನೇರ ಸವಾಲು ಹಕುತ್ತಿದ್ದೇನೆ. ನಿಮ್ಮ ಭಾಷಣದ ಸುಳ್ಳನ್ನು ಸಾಬೀತು ಮಾಡಿದರೆ ನಾನು ಆ ಕ್ಷಣವೇ ರಾಜಕೀಯ ನಿವೃತ್ತಿ ಪಡೆಯಲು ಸಿದ್ದ. ಇಲ್ಲದಿದ್ದರೆ ನೀವು ರಾಜಕೀಯ ನಿವೃತ್ತಿ ಘೋಷಿಸುತ್ತೀರಾ ಎಂದು ಸವಾಲು ಹಾಕಿದರು. 
 
ನಿಮಗೆ ಭ್ರಷ್ಟಾಚಾರದ ವಿರುದ್ಧ ಮಾತನಾಡುವ ನೈತಿಕತೆ ಇಲ್ಲ. ಇದ್ದರೆ ನನ್ನ ಸವಾಲನ್ನು ಸ್ವೀಕರಿಸಿ ಎಂದು ಮೋದಿಯವರಿಗೆ ಕರೆ ನೀಡಿದರು. 
 
ಆಪರೇಷನ್ ಕಮಲದ ಮೂಲಕ ಹಲವು ರಾಜ್ಯಗಳಲ್ಲಿ ಶಾಸಕರನ್ನು ಖರೀಧಿಸಿದರಲ್ಲಾ ಅದಕ್ಕೆಲ್ಲಾ ಅಷ್ಟು ಕೋಟಿ ಕೋಟಿ ಹಣ ಎಲ್ಲಿಂದ ಬಂತು ನಿಮಗೆ? ಮಹಾರಾಷ್ಟ್ರ ಜನತೆಗೆ ಉತ್ತರಿಸಿ ಎಂದು ಮತ್ತೊಂದು ಸವಾಲು ಎಸೆದರು.
 
ಏಕನಾಥ್ ಶಿಂಧೆ ಮಹಾರಾಷ್ಟ್ರ ಜನರ ಆಶೀರ್ವಾದದಿಂದ ಅಧಿಕಾರಕ್ಕೆ ಬರಲಿಲ್ಲ. ಆಪರೇಷನ್ ಕಮಲದ ಮೂಲಕ  ಅಧಿಕಾರಕ್ಕೆ ಬಂದರು. ಈ ಆಪರೇಷನ್ ಗೆ ಬಳಸಿದ ಹಣ ಯಾವುದು? ಭ್ರಷ್ಟಾಚಾರದ್ದು ಅಲ್ವಾ? ಆ ಹಣ ಎಲ್ಲಿಂದ ಬಂತು ಎಂದು ಮಹಾರಾಷ್ಟ್ರ ಜನರಿಗೆ ಹೇಳಬಲ್ಲಿರಾ ಎಂದು ಪ್ರಶ್ನಿಸಿದರು. 
 
ಕರ್ನಾಟಕ ಜನ ತಿರಸ್ಕರಿಸಿದರು- ಮಹಾರಾಷ್ಟ್ರ ಜನರ ಸರದಿ ಈಗ: ಸೆಡ್ಡು ಹೊಡೆದು ತೋರಿಸಿ
 
ಆಪರೇಷನ್ ಕಮಲದ ಬಿಜೆಪಿಯ ಹೊಲಸು ಸಂಸ್ಕಾರವನ್ನು ಕರ್ನಾಟಕ ಜನತೆ ತಿರಸ್ಕರಿಸಿದ್ದಾರೆ. ಈಗ ಮಹಾರಾಷ್ಟ್ರ ಜನತೆಯ ಸರದಿ. ನೀವೂ ಆಪರೇಷನ್ ಕಮಲದ ಸಂಸ್ಕಾರವನ್ನು ತಿರಸ್ಕರಿಸಿ ಸೆಡ್ಡು ಹೊಡೆಯಿರಿ ಎಂದು ಕರೆ ನೀಡಿದರು.
 
ಬಿಜೆಪಿಯ ಮೋದಿ ಮತ್ತು ಸುಳ್ಳಿನ ಸರದಾರರೇ ಕರ್ನಾಟಕಕ್ಕೆ ಬಂದು ನೋಡಿ: ನಿಮಗೆ ವಿಶೇಷ ವಿಮಾನದ ವ್ಯವಸ್ಥೆ ನಾನೇ ಮಾಡ್ತೀನಿ 
 
 ಕರ್ನಾಟಕದಲ್ಲಿ ಗ್ಯಾರಂಟಿ ಯೋಜನೆಗಳು ಜಾರಿ ಆಗದೆ ಕಾಂಗ್ರೆಸ್ ಕರ್ನಾಟಕ ಜನತೆಗೆ ವಂಚಿಸಿದ್ದಾಗಿ ಮಹಾರಾಷ್ಟ್ರ ಬಿಜೆಪಿ ಸುಳ್ಳು ಜಾಹಿರಾತು ನೀಡಿದೆ.  ಇವರಿಗೆ ನಾಚಿಕೆ ಇಲ್ಲ. 
 
ಬಿಜೆಪಿಯ ಮೋದಿ ಮತ್ತು ಸುಳ್ಳಿನ ಸರದಾರರೇ ಕರ್ನಾಟಕಕ್ಕೆ ಬಂದು ನೋಡಿ. ನಿಮಗೆ ವಿಶೇಷ ವಿಮಾನದ ವ್ಯವಸ್ಥೆ ನಾನೇ ಮಾಡ್ತೀನಿ. ಕರ್ನಾಟಕದಲ್ಲಿ ಗ್ಯಾರಂಟಿಗಳು ಜಾರಿ ಆಗಿಲ್ಲ ಎಂದರೆ ನಾನು ರಾಜೀನಾಮೆ ಕೊಡ್ತೀನಿ. ನಮ್ಮ ನೆಲದಲ್ಲಿ ಗ್ಯಾರಂಟಿಗಳು ಜಾರಿ ಆಗಿರುವುದು ಸತ್ಯ ಆದರೆ ನಿಮ್ಮ ಸುಳ್ಳುನ ಜಾಹಿರಾತನ್ನು ವಾಪಾಸ್ ಪಡೆದು ಮಹಾರಾಷ್ಟ್ರ ಜನತೆಯ ಕ್ಷಮೆ ಕೇಳಬೇಕು. ಈ ಸವಾಲು ಸ್ವೀಕರಿಸುತ್ತೀರಾ ಎಂದು ಸವಾಲು ಹಾಕಿದರು. 
 
ವರ್ಷಕ್ಕೆ 56 ಸಾವಿರ ಕೋಟಿ ರೂಪಾಯಿಯನ್ನು ಗ್ಯಾರಂಟಿಗಳ ಮೂಲಕ ನನ್ನ ರಾಜ್ಯದ ಕೋಟಿ ಕೋಟಿ ಜನರ ಖಾತೆಗೆ ನೇರವಾಗಿ ಹಣ ಹಾಕುತ್ತಿದ್ದೇವೆ.
 
ಮಹಾರಾಷ್ಟ್ರದಲ್ಲೂ ಕಾಂಗ್ರೆಸ್ ಮತ್ತು ಮಹಾ ವಿಕಾಸ್ ಅಘಾಡಿ ಗ್ಯಾರಂಟಿಗಳನ್ನು ಘೋಷಣೆ ಮಾಡಿದೆ. ಇಲ್ಲೂ ಮಹಾ ಆಘಾಡಿ ಅಧಿಕಾರಕ್ಕೆ ಬಂದು ಎಲ್ಲಾ ಭರವಸೆಗಳನ್ನು ಈಡೇರಿಸುವುದು ಶತಸಿದ್ದ. ಏಕೆಂದರೆ ನುಡಿದಂತೆ ನಡೆದ ಚರಿತ್ರೆ ಕಾಂಗ್ರೆಸ್ ಪಕ್ಷಕ್ಕೆ ಇದೆ ಎಂದರು. 
 
ಮಹಾ ವಿಕಾಸ್ ಆಘಾಡಿ ಮಾತ್ರ ಕೊಟ್ಟ ಭರವಸೆಗಳನ್ನು ಈಡೇರಿಸಿ ಮಹಾರಾಷ್ಟ್ರ ಜನರ ಬದುಕಿಗೆ ಆರ್ಥಿಕ ಶಕ್ತಿ ನೀಡುತ್ತದೆ. ಆದ್ದರಿಂದ ಬಿಜೆಪಿ ಸೋಲಿಸಿ ಆರ್ಥಿಕ ಶಕ್ತಿ ಪಡೆಯಿರಿ ಎಂದು ಕರೆ ನೀಡಿದರು. 
 
ಮಹಾರಾಷ್ಟ್ರ ಮಾಜಿ ಮುಖ್ಯಮಂತ್ರಿ ಸುಶೀಲ್ ಕುಮಾರ್ ಶಿಂಧೆ, ಸಂಸದೆ ಪ್ರಣತಿ ಶಿಂಧೆ, ಸಚಿವರಾದ ಎಂ.ಪಿ.ಪಾಟೀಲ್, ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಗೋವಿಂದರಾಜು ಸೇರಿದಂತೆ ಹಲವು ಮುಖಂಡರು ಉಪಸ್ಥಿತರಿದ್ದರು.
 
 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ