ಮುಖ್ಯಮಂತ್ರಿಗಳೇ ಪೊಲೀಸರ ಮೇಲೆ ಮುಗಿಬಿದ್ದಿದ್ದಾರೆ, ನಾಚಿಕೆಯಾಗಲ್ವೇ: ಛಲವಾದಿ ನಾರಾಯಣಸ್ವಾಮಿ

Krishnaveni K

ಸೋಮವಾರ, 28 ಏಪ್ರಿಲ್ 2025 (17:14 IST)
ಬೆಂಗಳೂರು: ಸಿದ್ದರಾಮಯ್ಯನವರೇ, ಬೆಳಗಾವಿಯಲ್ಲಿ ಮಹಿಳಾ ಮೋರ್ಚಾ ಕಾರ್ಯಕರ್ತರು ಹೇಗೆ ಬಂದರೆಂದೇ ನಿಮಗೆ ತಿಳಿದಿಲ್ಲ. ನಿಮ್ಮ ಇಂಟೆಲಿಜೆನ್ಸ್ ವೈಫಲ್ಯ ಇದಲ್ಲವೇ? ಇಷ್ಟು ಸಣ್ಣ ವಿಷಯಕ್ಕೇ ನಿಮ್ಮ ಬೇಹುಗಾರಿಕಾ ವ್ಯವಸ್ಥೆ ಸರಿ ಇಲ್ಲ ಎಂದು ವಿಧಾನಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಅವರು ಟೀಕಿಸಿದ್ದಾರೆ.

ಇಂದು ಇಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಮುಖ್ಯಮಂತ್ರಿಗಳು ಪೊಲೀಸರ ಮೇಲೆ ಮುಗಿಬಿದ್ದಿದ್ದಾರೆ. ಹಾಗಿದ್ದರೆ ಭಯೋತ್ಪಾದಕರು ಹೇಗೆ ಈ ದೇಶಕ್ಕೆ ಬಂದರೆಂದು ಕೇಳುತ್ತೀರಲ್ಲವೇ? ನಿಮಗೆ ನಾಚಿಕೆ ಆಗುವುದಿಲ್ಲವೇ? ಮುಖ್ಯಮಂತ್ರಿಗಳ ಪರಿಸ್ಥಿತಿ ಹೀಗಿದ್ದರೆ ನೀವು ಜನಸಾಮಾನ್ಯರಿಗೆ ಏನು ರಕ್ಷಣೆ ಕೊಡುತ್ತೀರಿ? ಎಂದು ಪ್ರಶ್ನಿಸಿದರು.

ಕುತಂತ್ರದ ಮೂಲಕ ಭಯೋತ್ಪಾದನೆ ಮಾಡುವ ವಿಚಾರದಲ್ಲಿ ನೀವು ದೇಶದ ಪ್ರಧಾನಿಯನ್ನು ಪ್ರಶ್ನೆ ಮಾಡುತ್ತೀರಿ ಎಂದು ಆಕ್ಷೇಪಿಸಿದರು. ನಿಮ್ಮ ಇಂಟೆಲಿಜೆನ್ಸ್ ವೈಫಲ್ಯಕ್ಕೆ ನಿಮ್ಮ ಉತ್ತರ ಏನು ಎಂದು ಕೇಳಿದರು.

ಬೆಳಗಾವಿಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಪಕ್ಷದ ಕಾರ್ಯಕ್ರಮ ಮಾಡಲು ಹೋಗಿದ್ದರು. ಕಾರ್ಯಕ್ರಮದ ಸಂದರ್ಭದಲ್ಲಿ ದೇಶದ ವಿರುದ್ಧವಾಗಿ ಮತ್ತು ಜಮ್ಮು-ಕಾಶ್ಮೀರದ ವಿಚಾರದಲ್ಲಿ ಸುಳ್ಳುಗಳನ್ನು ಹೇಳುವ ಕೆಲಸ ಮಾಡುತ್ತಿದ್ದರು ಎಂದು ಆರೋಪಿಸಿದರು.

ಸಿದ್ದರಾಮಯ್ಯರ ನಡೆಯನ್ನು ವಿರೋಧಿಸಿ ಬಿಜೆಪಿ ಮಹಿಳಾ ಮೋರ್ಚಾದ ಮುಖಂಡರು ಮತ್ತು ಕಾರ್ಯಕರ್ತರು ಕಪ್ಪು ಬಟ್ಟೆ ಪ್ರದರ್ಶಿಸಿದ್ದಾರೆ. ಇದು ಪ್ರಜಾಪ್ರಭುತ್ವ ವ್ಯವಸ್ಥೆಯ ಒಳಗಿರುವಂಥದ್ದು. ಇಲ್ಲಿ ಯಾರೂ ಮಚ್ಚು, ದೊಣ್ಣೆ ತೆಗೆದುಕೊಂಡು ಹೋಗಿರಲಿಲ್ಲ. ಅಥವಾ ಕಾಶ್ಮೀರದಂತೆ ಎಕೆ 47 ಒಯ್ದಿರಲಿಲ್ಲ ಎಂದರು.

ಮಹಿಳೆಯರನ್ನು  ಪೊಲೀಸ್ ವ್ಯಾನ್ ಹತ್ತಿಸಿದ ಮೇಲೆ ಕಾಂಗ್ರೆಸ್ಸಿನ ಗೂಂಡಾಗಳು ಅವರ ಮೇಲೆ ಮುಗಿಬಿದ್ದು ಹೊಡೆದಿದ್ದಾರೆ. ಇದು ಗೂಂಡಾ ಸರಕಾರದ ವರ್ತನೆ ಎಂದು ಖಂಡಿಸಿದರು. ಇದರ ಜೊತೆಗೆ ನಾರಾಯಣ್ ಎಂಬ ಅಡಿಶನಲ್ ಎಸ್ಪಿ ಕಪಾಳಮೋಕ್ಷಕ್ಕೂ ಸಿದ್ದರಾಮಯ್ಯ ಮುಂದಾಗಿದ್ದರು. ಆಗ ಅಡಿಶನಲ್ ಎಸ್ಪಿ ಒಂದು ಹೆಜ್ಜೆ ಹಿಂದೆ ಹೋದುದರಿಂದ ಕಪಾಳಮೋಕ್ಷ ತಪ್ಪಿದೆ. ಪೊಲೀಸರು ಇವರ ಗುಲಾಮರೆಂದು ಇವರು ತಿಳಿದುಕೊಂಡಿದ್ದಾರೆ ಎಂದು ಟೀಕಿಸಿದರು.
 
 
 
 
 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ