ಮೈಸೂರು : ಪಠ್ಯ ಪರಿಷ್ಕರಣೆ ವಿಚಾರವಾಗಿ ದಿನಕ್ಕೊಂದು ವಿವಾದ ಭುಗಿಲೇಳುತ್ತಿದ್ದು, ರಾಜ್ಯ ಸರ್ಕಾರ ತೀವ್ರ ಒತ್ತಡ ಎದುರಿಸುತ್ತಿರುವಂತೆ ಕಾಣುತ್ತಿದೆ.
ಅದ್ರಲ್ಲೂ ಪಠ್ಯಪುಸ್ತಕ ಸಮಿತಿ ಅಧ್ಯಕ್ಷ ರೋಹಿತ್ ಚಕ್ರತೀರ್ಥ ತಲೆದಂಡಕ್ಕೆ ದಿನೇ ದಿನೇ ಆಗ್ರಹ ಹೆಚ್ಚುತ್ತಿದೆ. ದೇವನೂರ ಮಹಾದೇವ ಸೇರಿದಂತೆ 6 ಮಂದಿ ಸಾಹಿತಿಗಳು ಪಠ್ಯವಾಪ್ಸಿ ಚಳವಳಿ ಆರಂಭಿಸಿದ್ದಾರೆ.
ಬೆಂಗಳೂರು, ಚಾಮರಾಜನಗರ, ಬಾಗಲಕೋಟೆ ಸೇರಿ ಹಲವೆಡೆ ಪ್ರತಿಭಟನೆಗಳು ನಡೆಯುತ್ತಲೇ ಇವೆ. ರಾಷ್ಟ್ರಕವಿ ಕುವೆಂಪುರನ್ನು ಅಪಮಾನಿಸಿದವರ ವಿರುದ್ಧ ಕ್ರಮಕ್ಕೆ ಒತ್ತಾಯಿಸಿದ್ದ ಆದಿಚುಂಚನಗಿರಿ ಶ್ರೀಗಳ ಮನವೊಲಿಸಲು ಸರ್ಕಾರ ಪ್ರಯತ್ನಿಸುತ್ತಿದೆ.
ಈಗಾಗಲೇ ತಮ್ಮ ಪಠ್ಯವನ್ನು ಹಿಂಪಡೆಯುವುದಾಗಿ ಸರ್ಕಾರಕ್ಕೆ ಪತ್ರ ಬರೆದಿದ್ದ ಹಿರಿಯ ಸಾಹಿತಿ ದೇವನೂರ ಮಹಾದೇವ ಶಿಕ್ಷಣ ಸಚಿವರಿಗೆ ಮತ್ತೊಂದು ಪತ್ರ ಬರೆದಿದ್ದಾರೆ. ತಮ್ಮ ಪಠ್ಯವನ್ನು ಹಿಂಪಡೆದಿರುವುದಾಗಿ ಹೇಳಿ ಶಿಕ್ಷಣ ಇಲಾಖೆಗೆ ಪತ್ರ ಬರೆದಿದ್ದರೂ ಲೆಕ್ಕಿಸದೇ ಇರುವುದು ನನಗೆ ದಬ್ಬಾಳಿಕೆ ಅನ್ನಿಸಿದೆ ಎಂದು ಅಸಮಧಾನ ವ್ಯಕ್ತಪಡಿಸಿದ್ದಾರೆ.