ರಾಯಚೂರು: ಗುರುರಾಯರ ಸನ್ನಿಧಿ ಮಂತ್ರಾಲಯದ ಶ್ರೀರಾಘವೇಂದ್ರ ಸ್ವಾಮಿ ಮಠಕ್ಕೆ ಕಳೆದೊಂದು ತಿಂಗಳಲ್ಲಿ ಭಕ್ತ ಸಾಗರವೇ ಹರಿದುಬಂದಿತ್ತು. ಅದರ ಫಲವಾಗಿ ಭಕ್ತರಿಂದ ಭಾರಿ ಪ್ರಮಾಣದ ಕಾಣಿಕೆ ಸಂಗ್ರಹವಾಗಿದೆ.
ಕಳೆದ 31 ದಿನಗಳ ಕಾಣಿಕೆ ಹುಂಡಿ ಎಣಿಕೆಕಾರ್ಯ ಮುಕ್ತಾಯಗೊಂಡಿದ್ದು, ₹ 3,92,58,940 ಕಾಣಿಕೆ ಸಂಗ್ರಹವಾಗಿದೆ. ರಜೆ, ಹಬ್ಬದ ಹಿನ್ನೆಲೆ ಮಂತ್ರಾಲಯ ಮಠಕ್ಕೆ ಕೋಟ್ಯಾಂತರ ರೂಪಾಯಿ ಕಾಣಿಕೆ ಹರಿದು ಬಂದಿದೆ.
ಒಟ್ಟು ಕಾಣಿಕೆಯಲ್ಲಿ 3 ಕೋಟಿ 83 ಲಕ್ಷ 93,760 ರೂ. ಕರೆನ್ಸಿ ನೋಟುಗಳು ಹಾಗೂ 8,65,180 ರೂ. ನಾಣ್ಯಗಳು ಸಂಗ್ರಹವಾಗಿವೆ. ಇನ್ನೂ 174 ಗ್ರಾಂ ಚಿನ್ನ, 1270 ಗ್ರಾಂ ಬೆಳ್ಳಿ ಕಾಣಿಕೆ ರೂಪದಲ್ಲಿ ಬಂದಿದೆ. ಕಳೆದ ವರ್ಷ ನವೆಂಬರ್ ತಿಂಗಳ ಕಾಣಿಕೆ ಹುಂಡಿಯಲ್ಲಿ ಒಟ್ಟು 2,86,43,454 ರೂ. ಕಾಣಿಕೆ ಸಂಗ್ರಹವಾಗಿತ್ತು.
ಮಂತ್ರಾಲಯ ಮಠದಲ್ಲಿ ಗುರುವಾರ ನಡೆಸಲಾದ ಹುಂಡಿ ಎಣಿಕೆ ಕಾರ್ಯ ಮುಕ್ತಾಯವಾಗಿದ್ದು, ಎಣಿಕೆ ಕಾರ್ಯದಲ್ಲಿ ಮಠದ ನೂರಾರು ಸಿಬ್ಬಂದಿ, ಭಜನಾ ಮಂಡಳಿ, ಗುರುಪಾದ ಕರಸೇವಕರು ಪಾಲ್ಗೊಂಡಿದ್ದರು.