ಕುಂದಾಪುರ, ಜುಲೈ 28,2025: ಬದುಕಿನ ಸವಾಲುಗಳನ್ನು ಕಷ್ಟವೆಂದುಕೊಂಡು ಕೈಕಟ್ಟಿ ಕುಳಿತರೆ ಎಲ್ಲವೂ ಕಷ್ಟವಾಗುತ್ತದೆ. ಆದರೆ, ನಿರಂತರ ಅಭ್ಯಾಸದಿಂದ ಸವಾಲುಗಳನ್ನು ಹಿಮ್ಮೆಟ್ಟಿಸಿ ಸಾಧನೆ ಮಾಡಲು ಸಾಧ್ಯವಾಗುತ್ತದೆ ಎಂದು ಕೆ.ವಿ.ಸಿ ಸಂಸ್ಥೆಯ ಸಿ.ಎ. ದೀಪಿಕಾ ವಸನಿ ಅವರು ಹೇಳಿದರು. ಯಡಾಡಿ-ಮತ್ಯಾಡಿಯಲ್ಲಿರುವ ಸುಜ್ಞಾನ ಪದವಿ ಪೂರ್ವ ಕಾಲೇಜಿನಲ್ಲಿ ವಾಣಿಜ್ಯ ವಿಭಾಗದ ವತಿಯಿಂದ ಸಿಎ ಹಾಗೂ ಸಿಎಸ್ ಫೌಂಡೇಶನ್ ಕೋರ್ಸ್ ವಿದ್ಯಾರ್ಥಿಗಳಿಗೆ ಸೋಮವಾರ ಏರ್ಪಡಿಸಿದ್ದ ಓರಿಯೆಂಟೇಶನ್ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಬದುಕಿನಲ್ಲಿ ಪರಿಶ್ರಮ ಅತ್ಯಂತ ಅಗತ್ಯ. ವಿದ್ಯಾರ್ಥಿ ಜೀವನವನ್ನು ಖುಷಿಯಿಂದ ಕಳೆಯುವುದರ ಜೊತೆಗೆ ಪರಿಶ್ರಮ ರೂಢಿಸಿಕೊಳ್ಳುವ ಕಡೆಗೆ ಗಮನಹರಿಸಬೇಕು. ಇದು ಭವಿಷ್ಯದ ಏಳ್ಗೆಗೆ ಭದ್ರ ಬುನಾದಿಯಾಗಲಿದೆ ಎಂದು ಕಿವಿಮಾತು ನುಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸಂಸ್ಥೆಯ ಅಧ್ಯಕ್ಷರಾದ ಡಾ. ರಮೇಶ್ ಶೆಟ್ಟಿ ಅವರು ಮಾತನಾಡಿ, ಸಿಎ ಮತ್ತು ಸಿಎಸ್ ಹುದ್ದೆಗಳಿಗೆ ಇರುವ ಬೇಡಿಕೆಯ ಕುರಿತು ಮನವರಿಕೆ ಮಾಡಿಕೊಟ್ಟರು. ಸರಿಯಾದ ದಿಕ್ಕಿನಲ್ಲಿ ಪರಿಶ್ರಮ ವಹಿಸಿದರೆ ಎದುರಾಗುವ ಸವಾಲುಗಳಿಗೆ ಪರಿಹಾರ ಕಂಡುಕೊಂಡು ಸಾಧನೆಗೈಯುವುದು ಸಾಧ್ಯವಾಗುತ್ತದೆ. ಅಂತಹ ಶಕ್ತಿ .ವಿದ್ಯಾರ್ಥಿಗಳಿಗೆ ಇದೆ ಎಂದು ಅವರು ವಿವರಿಸಿದರು.
ಮುಂದುವರಿದು, ರಾಜ್ಯ ಹಾಗೂ ದೇಶದಲ್ಲಿ ಉದ್ಯಮಗಳು ಬೆಳೆಯುತ್ತಿರುವುದರಿಂದ ವಾಣಿಜ್ಯ, ಚಾರ್ಟೆಡ್ ಅಕೌಂಟೆಂಟ್, ಕಂಪನಿ ಸೆಕ್ರೆಟರಿ ಇತ್ಯಾದಿ ಹುದ್ದೆಗಳಿಗೆ ಬೇಡಿಕೆ ಅಧಿಕವಾಗಿದ್ದು ಮುಂಬರುವ ದಿನಗಳಲ್ಲಿ ಇದು ಇನ್ನಷ್ಟೂ ಏರಿಕೆ ಕಾಣಲಿದೆ.ಇದನ್ನು ಮನಗಂಡು ಕಾಲೇಜಿನಲ್ಲಿ ಈ ಕೋರ್ಸ್ಗಳ ವಿದ್ಯಾರ್ಥಿಗಳಿಗೆ ಆರಂಭಿಕ ಹಂತದಿಂದಲೇ ಕೌಶಲಗಳನ್ನು ಮೈಗೂಡಿಸಲು ಆದ್ಯತೆ ನೀಡಲಾಗಿದೆ ಎಂದು ಅವರು ಹೇಳಿದರು.
ವಿದ್ಯಾರ್ಥಿಗಳು ಸೋಶಿಯಲ್ ಮೀಡಿಯಾ, ಟಿವಿ ಎಂದು ಸಮಯವನ್ನು ವ್ಯರ್ಥಮಾಡದೆ, ಒಂದು ಗುರಿ ಇರಿಸಿಕೊಂಡು ಕನಸನ್ನು ನನಸು ಮಾಡಿಕೊಳ್ಳಬೇಕು. ಸಿಎ, ಸಿಎಸ್ ನಂತಹ ವೃತ್ತಿಪರ ಕೋರ್ಸುಗಳನ್ನು ಆಯ್ಕೆ ಮಾಡಿಕೊಂಡಿರುವ ವಿದ್ಯಾರ್ಥಿಗಳು ಕೌಶಲಗಳನ್ನು ಮೈಗೂಡಿಸಿಕೊಂಡು ವೃತ್ತಿಬದುಕು ಹಾಗೂ ವೈಯಕ್ತಿಕ ಬದುಕಿನಲ್ಲಿ ಯಶಸ್ಸು ಕಾಣಬೇಕು ಎಂದು ಸಂಸ್ಥೆಯ ಖಜಾಂಚಿ ಭರತ್ ಶೆಟ್ಟಿ ನುಡಿದರು.
ಕಾರ್ಯದರ್ಶಿ ಪ್ರತಾಪ್ಚಂದ್ರ ಶೆಟ್ಟಿ, ಮಂಗಳೂರಿನ ಕೆ.ವಿ.ಸಿ ಅಕಾಡೆಮಿ ನಿರ್ದೇಶಕರಾದ ಸಿಎ ಜೇಸನ್ ಕ್ಯಾಸ್ತಲಿನೊ, ಕುಂದಾಪುರದ ಚಾರ್ಟೆಡ್ ಅಕೌಂಟೆಂಟ್ ಸಿಎ ನಾಗರಾಜ್ ಹೆಬ್ಬಾರ್ ಉಪಸ್ಥಿತರಿದ್ದರು.
ಇಂಗ್ಲಿಷ್ ವಿಭಾಗದ ಮುಖ್ಯಸ್ಥ ವಿನಯ್ ಕುಮಾರ್ ನಿರೂಪಿಸಿದರು. ಪ್ರಾಂಶುಪಾಲರಾದ ರಂಜನ್ ಬಿ.ಶೆಟ್ಟಿ ಸ್ವಾಗತಿಸಿದರು, ಸಿಎ ಫೌಂಡೇಶನ್ ಸಂಯೋಜಕ ಪ್ರಮಥ್ ಶೆಟ್ಟಿ ವಂದಿಸಿದರು. ಕಾಲೇಜಿನ ಭೋದಕ ವೃಂದದವರು, ಭೋದಕೇತರ ಸಿಬ್ಬಂದಿ ಹಾಗೂ ವಾಣಿಜ್ಯ ವಿಭಾಗದ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ಸುಜ್ಞಾನ ಎಜುಕೇಶನಲ್ ಟ್ರಸ್ಟ್ನಲ್ಲಿ ಪಿಯುಸಿಯಿಂದಲೇ ವಿದ್ಯಾರ್ಥಿಗಳಿಗೆ ಸಿಎ ಹಾಗೂ ಸಿಎಸ್ ವೃತ್ತಿಪರ ಕೋರ್ಸ್ಗಳ ತರಬೇತಿ ನೀಡಲಾಗುತ್ತದೆ.