ಸಂಗೀತಕ್ಕೆ ತಲೆದೂಗಿದ ಹಸುಗಳು
ಸಂಗೀತ ಅಥವಾ ಯಾವುದೇ ಕಲೆಯೂ ಭಾಷೆ, ಗಡಿ, ಮತಪಂಥಕ್ಕೆ ಸೀಮಿತವಾದುದಲ್ಲ. ಕಲೆಗೆ ಇರುವುದು ಒಂದೇ ಭಾಷೆ ಅದು ಹೃದಯಸಂವಾದಕ್ಕೆ ಸಂಬಂಧಿಸಿದ್ದು. ಸಂಗೀತವಂತೂ ಈ ವಿಷಯದಲ್ಲಿ ಮೊದಲ ಸ್ಥಾನದಲ್ಲಿ ನಿಲ್ಲುತ್ತದೆ. ವೈರಲ್ ಆಗುತ್ತಿರುವ ವಿಡಿಯೋದಲ್ಲಿ ವ್ಯಕ್ತಿಯೋರ್ವ ಹೊಲದಲ್ಲಿ ನಿಂತು ಸ್ಯಾಕ್ಸೊಫೋನ್ ನುಡಿಸುತ್ತಿದ್ದಾನೆ. ಸ್ವಲ್ಪ ಹೊತ್ತಿಗೆ ಅಲ್ಲೆಲ್ಲೋ ದೂರದಲ್ಲಿ ಮೇಯಲು ಹೋಗಿದ್ದ ಹಸುಗಳು ಒಟ್ಟಾಗಿ ಬಂದು ಈತನ ಮುಂದೆ ನಿಲ್ಲುತ್ತವೆ. ಸ್ಯಾಕ್ಸೊಫೋನ್ನ ನಾದಕ್ಕೆ ಈ ಹಸುಗಳು ತಲೆದೂಗಿರುವ ಕಾರಣಕ್ಕೆ ಈ ವಿಡಿಯೋ ಇದೀಗ ವೈರಲ್ ಆಗಿದೆ. ಬಹುಶಃ ಇದು ನಿತ್ಯದ ಅಭ್ಯಾಸವಾಗಿರಬಹುದು. ಕೃಷ್ಣ ಹೇಗೆ ಕೊಳಲನ್ನೂದಿ ಹಸುಗಳನ್ನು ಕಾಯುತ್ತಿದ್ದನೋ ಹಾಗೆ ಈ ಆಧುನಿಕ ಕೃಷ್ಣ ಸ್ಯಾಕ್ಸೊಫೋನ್ ನುಡಿಸಿ ಹಸುಗಳನ್ನು ಕಾಯುತ್ತಿರಬಹುದು. ಒಮ್ಮೆ ಇವ ಸ್ಯಾಕ್ಸೊಫೋನ್ ನುಡಿಸುತ್ತಿದ್ದಂತೆ ಹೆಚ್ಚೂ ಕಡಿಮೆ 30 ಹಸುಗಳಾದರೂ ಇವನ ಬಳಿ ಒಟ್ಟುಗೂಡುತ್ತವೆ. ಅಧ್ಯಯನದ ಪ್ರಕಾರ, ಶಾಸ್ತ್ರೀಯ ಸಂಗೀತವು ಹಸುಗಳ ಮನಸ್ಸು ಮತ್ತು ದೇಹದ ಮೇಲೆ ಉತ್ತಮ ಪರಿಣಾಮ ಬೀರುತ್ತದೆ. ಸಂಗೀತ ಕೇಳುತ್ತಿದ್ದಂತೆ, ಒತ್ತಡವನ್ನುಂಟು ಮಾಡುವ ಹಾರ್ಮೋನುಗಳಲ್ಲಿ ಇಳಿಕೆ ಉಂಟಾಗಿ ಹಾಲಿನ ಉತ್ಪಾದನೆಯಲ್ಲಿ ಹೆಚ್ಚಳವಾಗುತ್ತದೆ. ಮೇಲಾಗಿ ಹಸುಗಳು ಶಾಸ್ತ್ರೀಯ ಸಂಗೀತವನ್ನು ಖುಷಿಯಿಂದ ಆಲಿಸುತ್ತವೆ ಎಂಬುದು ಸಾಬೀತಾಗಿದೆ.