ಬೆಳಗಾವಿ: ಅಧಿವೇಶನದ ಸಂದರ್ಭದಲ್ಲಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಬಗ್ಗೆ ಅಶ್ಲೀಲ ಶಬ್ಧ ಬಳಕೆ ಮಾಡಿದ್ದಾರೆ ಎಂಬ ಆರೋಪಕ್ಕೆ ಗುರಿಯಾಗಿರುವ ಬಿಜೆಪಿ ಎಂಎಲ್ ಸಿ ಸಿಟಿ ರವಿ ಪೊಲೀಸರ ಜೊತೆ ವಾಗ್ವಾದ ನಡೆಸಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ರಾತ್ರೋ ರಾತ್ರಿ ಸಿಟಿ ರವಿಯವರನ್ನು ಬಂಧಿಸಿ ಪೊಲೀಸರು ಹಣೆಯಿಂದ ರಕ್ತ ಸೋರುತ್ತಿದ್ದರೂ ನಗರವಿಡೀ ಸುತ್ತಾಡಿಸಿದ್ದಾರೆ. ಇದಕ್ಕೆ ಸಿಟಿ ರವಿ ಆಕ್ರೋಶಗೊಂಡಿದ್ದಾರೆ. ನೇರವಾಗಿ ರಸ್ತೆಯಲ್ಲೇ ಕುಳಿತು ಪೊಲೀಸರ ಜೊತೆ ವಾಗ್ವಾದ ನಡೆಸಿದ್ದಾರೆ.
ನನ್ನನ್ನು ಕೊಲೆ ಮಾಡಕ್ಕೇ ಇಲ್ಲಿಗೆ ಕರೆದುಕೊಂಡು ಬಂದಿದ್ದೀರಿ ನೀವು. ಇಲ್ಲಾಂದ್ರೆ ರಾತ್ರಿಯಿಡೀ ಹೀಗೆ ಸುತ್ತಾಡಿಸುತ್ತಿರುವುದು ಯಾಕೆ. ಏನು ನಿಮ್ಮ ಉದ್ದೇಶ ಎಂದು ಸಿಟಿ ರವಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ವೇಳೆ ಪೊಲೀಸರು ಸಮಾಧಾನಿಸಲು ಪ್ರಯತ್ನಿಸಿದರೂ ಅವರು ಸುಮ್ಮನಾಗಲಿಲ್ಲ. ನನ್ನ ಜೀವಕ್ಕೆ ಏನೇ ಆದರೂ ಅದಕ್ಕೆ ಲಕ್ಷ್ಮೀ ಹೆಬ್ಬಾಳ್ಕರ್ ಮತ್ತು ಡಿಕೆ ಶಿವಕುಮಾರ್ ಅವರೇ ಕಾರಣ ಎಂದಿದ್ದಾರೆ.
ಹಣೆಯ ಗಾಯಕ್ಕೆ ಪ್ರಥಮ ಚಿಕಿತ್ಸೆ ಕೊಡಿಸಲು ಪೊಲೀಸರು ವಿಳಂಬ ಮಾಡಿದ್ದಾರೆ. ಹಣೆಯಿಂದ ರಕ್ತ ಸುರಿಯುತ್ತಿದ್ದರೂ ಊರಿಡೀ ಪೊಲೀಸ್ ವಾಹನದಲ್ಲಿ ಸುತ್ತಿಸಿದ್ದಾರೆ. ಬಳಿಕ ನಿರ್ಜನ ಪ್ರದೇಶದಲ್ಲಿ ಕಾರು ನಿಲ್ಲಿಸಿ ಫೋನ್ ನಲ್ಲಿ ಮಾತನಾಡುತ್ತಾ ನಿಂತಿದ್ದಾರೆ. ನನಗೆ ತೊಂದರೆ ಮಾಡಲೆಂದೇ ಈ ಷಡ್ಯಂತ್ರ ಮಾಡಿದ್ದಾರೆ ಎಂದು ಸಿಟಿ ರವಿ ಆರೋಪ ಮಾಡಿದ್ದಾರೆ.