ಕಬ್ಬಿನ ಗದ್ದೆ, ಕ್ವಾರಿಗೆ ಕರೆದುಕೊಂಡು ಹೊಗಿದ್ದರು: ರಾತ್ರಿ ನಡೆದಿದ್ದನ್ನು ವಿವರಿಸಿದ ಸಿಟಿ ರವಿ

Krishnaveni K

ಶನಿವಾರ, 21 ಡಿಸೆಂಬರ್ 2024 (13:54 IST)
Photo Credit: X
ಬೆಂಗಳೂರು: ಲಕ್ಷ್ಮೀ ಹೆಬ್ಬಾಳ್ಕರ್ ಗೆ ಅಶ್ಲೀಲ ಪದ ಹೇಳಿದ್ದಾರೆಂಬ ಆರೋಪದಲ್ಲಿ ಬಂಧಿತರಾಗಿದ್ದ ಸಿಟಿ ರವಿ ಮೊನ್ನೆ ರಾತ್ರಿ ನಡೆದಿದ್ದ ಕರಾಳ ಘಟನೆಗಳನ್ನು ಇಂದು ಪತ್ರಿಕಾಗೋಷ್ಠಿಯಲ್ಲಿ ವಿವರಿಸಿದ್ದಾರೆ.

ಶಾಸಕ ಸಿಟಿ ರವಿಯನ್ನು ಬಂಧಿಸಿದ ಪೊಲೀಸರು ತಲೆಗೆ ಗಾಯವಾಗಿದ್ದರೂ ಪ್ರಥಮ ಚಿಕಿತ್ಸೆಯನ್ನೂ ಕೊಡಿಸದೇ ರಾತ್ರಿಯಿಡೀ ಕಾರಿನಲ್ಲಿ ಸುತ್ತಾಡಿಸಿದ್ದರು. ಊಟವನ್ನೂ ಕೊಟ್ಟಿಲ್ಲ ಎಂಬ ಆರೋಪವೂ ಇದೆ. ಆ ದಿನ ನಡೆದ ಘಟನೆ ಬಗ್ಗೆ ಸಿಟಿ ರವಿ ಇಂದು ಪತ್ರಿಕಾಗೋಷ್ಠಿಯಲ್ಲಿ ವಿವರಿಸಿದ್ದಾರೆ.

‘ಅಷ್ಟೊಂದು ಭದ್ರತೆ ಇರುವ ಸುವರ್ಣಸೌಧದಲ್ಲೇ ನನ್ನ ಮೇಲೆ ಹಲ್ಲೆ ಯತ್ನ ನಡೆದಿತ್ತು. ಬಳಿಕ ನನ್ನನ್ನು ಗುಂಪಿನಿಂದ ಹತ್ಯೆ ಮಾಡಿಸಿ ಕೊಲೆ ಮಾಡಲೆಂದೇ ಕಬ್ಬಿನ ಗದ್ದೆ, ಕ್ವಾರಿ ಎಂದು ಸುತ್ತಾಡಿಸಿದ್ದಾರೆ. ನಡು ನಡುವೆ ಅವರಿಗೆ ಫೋನ್ ಬರುತ್ತಿತ್ತು’ ಎಂದು ಸಿಟಿ ರವಿ ಶಾಕಿಂಗ್ ವಿಚಾರ ಹೇಳಿದ್ದಾರೆ.

‘ಸುವರ್ಣ ಸೌಧದಲ್ಲಿ ನನ್ನ ಮೇಲೆ ಹಲ್ಲೆ ಮಾಡಿದವರು ನಿನ್ನ ಕೊಲೆ ಮಾಡುತ್ತೇನೆ, ಸುವರ್ಣಸೌಧದಿಂದ ನಿನ್ನ ಹೆಣ ಚಿಕ್ಕಮಗಳೂರಿಗೆ ಕಳುಹಿಸುತ್ತೇನೆ ಎಂದಿದ್ದರು. ನಾನು ಗೇಟ್ ಒಳಗೆ ಹೋದ ಮೇಲೂ ಅವರು ಗೇಟ್ ಗೆ ಒದೆಯುತ್ತಿದ್ದರು. ನಾನು ಅಲ್ಲೇ ಧರಣಿಗೆ ಕೂತೆ. ಲಕ್ಷ್ಮೀ ಹೆಬ್ಬಾಳ್ಕರ್, ಚನ್ನರಾಜ್, ನಜೀರ್ ಅಹಮ್ಮದ್ ಮುಂತಾದವರು ನನ್ನನ್ನು ಏಕವಚನದಲ್ಲಿ ನಿಂದಿಸಿದರು. ಸಭಾಪತಿಯವರು ಎಡಿಜಿಪಿಯವರನ್ನು ಕರೆದು ಸಿಟಿ ರವಿಗೆ ಯಾವುದೇ ತೊಂದರೆಯಾಗದಂತೆ ಮನೆಗೆ ತಲುಪಿಸಬೇಕು ಎಂದಿದ್ದರು. ಇದಕ್ಕೆ ಎಡಿಜಿಪಿ ಕ್ರಮ ಕೈಗೊಳ್ಳುತ್ತೇವೆ ಎಂದಿದ್ದರು. ಸಂಜೆ 6.20 ಕ್ಕೆ ಧರಣಿ ಕೂತೆವು. ಈ ವೇಳೆ ಉಳಿದವರನ್ನು ಚದುರಿಸಿ ನನ್ನನ್ನು ಪ್ರತ್ಯೇಕವಾಗಿ ಎತ್ತಿಕೊಂಡು ಹೋದರು. ಮೊದಲು ಹೀರೇಬಾಗೇವಾಡಿಗೆ ಕರೆದುಕೊಂಡು ಹೋದರು. ನಂತರ ನನ್ನ ಖಾನಾಪುರಕ್ಕೆ ಕರೆದುಕೊಂಡು ಹೋದರು. ಯಾಕೆ ಕರೆದುಕೊಂಡು ಬಂದಿದ್ದೀರಿ ಎಂದರೂ ಉತ್ತರಿಸಲಿಲ್ಲ. ಪೊಲೀಸರು ಯಾರೊಂದಿಗೋ ಮಾತನಾಡುತ್ತಿದ್ದರು. ನನ್ನ ವಕೀಲರನ್ನೂ ಒಳಗೆ ಬಿಡಲಿಲ್ಲ. ಬಳಿಕ ಅಶೋಕ್ ಅವರು ವಕೀಲರನ್ನು ಕರೆದುಕೊಂಡು ಬಂದರು. ಸ್ವಲ್ಪ ಹೊತ್ತಾದ ಮೇಲೆ ಅವರನ್ನೂ ಹೊರಗೆ ಕಳುಹಿಸಿದರು. ಬಳಿಕ ನನ್ನನ್ನು ಬೇರೆ ಕಡೆಗೆ ಕರೆದುಕೊಂಡು ಹೋದರು. ಆಗ ನನ್ನ ತಲೆಗೆ ಗಾಯವಾಗಿತ್ತು. ಬಳಿಕ ಕಿತ್ತೂರಿಗೆ ಕರೆದುಕೊಂಡು ಹೋದರು. ನನ್ನ ಪಿಎ, ಬೆಂಬಲಿಗರು ಗಾಡಿಗೆ ಅಡ್ಡಿಪಡಿಸಲು ಯತ್ನಿಸಿದರು. ದಾರಿ ಮಧ್ಯೆ ಧಾರವಾಡ ಹೈಕೋರ್ಟ್ ಕಾಣಿಸಿತು. ನಾನು ಆಗ ಪೊಲೀಸರಿಗೆ ನೀವು ಸುಳ್ಳು ಹೇಳುತ್ತಿದ್ದೀರಿ ಗಾಡಿ ನಿಲ್ಲಿಸಿ ಎಂದೆ. ಆದರೆ ನಿಲ್ಲಿಸಲಿಲ್ಲ. ಗಾಬರಿಯಾಗಿ ನಾನು ಪತ್ನಿಗೆ ಲೈವ್ ಲೊಕೇಷನ್ ಕಳುಹಿಸಿದ್ದೆ. ಅದನ್ನು ಅರಿತು ಮಾಧ್ಯಮಗಳೂ ನಮ್ಮನ್ನು ಹಿಂಬಾಲಿಸಿದ್ದವು. ನನ್ನನ್ನು ಒಂದು ಕಬ್ಬಿನ ಗದ್ದೆಯೊಂದಕ್ಕೆ ಕರೆದುಕೊಂಡು ಹೋಗಿದ್ದರು. ಆದರೆ ಮಾಧ್ಯಮಗಳೂ ಬಂದಿದ್ದು ನೋಡಿ ಈ ನನ್ ಮಕ್ಳು ಇಲ್ಲಿಗೆ ಹೇಗೆ ಬಂದ್ರು ಎಂದು ಬೈದಿದ್ದರು. ರಾಮದುರ್ಗದಲ್ಲಿ ನರ್ಸ್ ಒಬ್ಬರಿಂದ ನನ್ನ ತಲೆ ಗಾಯಕ್ಕೆ ಟ್ರೀಟ್ ಮೆಂಟ್ ಮಾಡಿದರು. ಬಳಿಕ ಹಳ್ಳಿ ರಸ್ತೆ, ಕಾಡಿನ ರಸ್ತೆಯಲ್ಲೆಲ್ಲಾ ಕರೆದುಕೊಂಡು ಹೋದರು. ಒಂದು ಮಾಧ್ಯಮದ ವಾಹನಕ್ಕೂ ಗುದ್ದಿಸಿದ್ರು. ಬಳಿಕ ಒಂದು ಸ್ಟೋನ್ ಕ್ರಷರ್ ಇರುವ ಜಾಗಕ್ಕೆ ಕರೆದುಕೊಂಡು ಬಂದಾಗ ನಿಜಕ್ಕೂ ಗಾಬರಿಯಾಗಿ ಕಿರುಚಿದೆ. ಅದೃಷ್ಟವಶಾತ್ ಅಲ್ಲಿಗೂ ಮಾಧ್ಯಮಗಳು ಬಂದಿದ್ದವು. ನನ್ನ ಹತ್ಯೆ ಮಾಡಲು ಕರೆದುಕೊಂಡು ಬಂದಿದ್ದೀರಾ ಎಂದು ಕಿರುಚಾಡಿದೆ.

ಮತ್ತೆ ಮಾಧ್ಯಮದವರನ್ನು ತಡೆದು ಒಂದೇ ಗಾಡಿಯಲ್ಲಿಕರೆದುಕೊಂಡು ಹೋದರು. ನನ್ನ ಕಚೇರಿಯಿಂದ ಮಾಡುತ್ತಿದ್ದ ಟ್ವೀಟ್ ಗಳನ್ನು ನಾನೇ ಮಾಡುತ್ತಿದ್ದೇನೆ ಎಂದು ಭಾವಿಸಿದ್ದರು. ನನ್ನ ಕಬ್ಬಿನ ಗದ್ದೆಗೆ ಕರೆದುಕೊಂಡು ಹೋಗಿದ್ದೂ ಯಾರ ಮೂಲಕವೋ ಹೊಡಿಸಲು.  ಇದೆಲ್ಲವನ್ನೂ ಕೋರ್ಟ್ ಮುಂದೆ ಹೇಳಿದೆ. ಕಾರ್ಯಕರ್ತರು, ಮಾಧ್ಯಮಗಳು ಬಾರದೇ ಇದ್ದರೆ ಏನಾಗುತ್ತಿದ್ದೆನೋ ಗೊತ್ತಿಲ್ಲ’ ಎಂದು ಸಿಟಿ ರವಿ ಭಯಾನಕ ಅನುಭವ ಹೇಳಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ