ಕಲಬುರ್ಗಿ: ಪ್ರಿಯಾಂಕ್ ಖರ್ಗೆ ರವರೇ 1948ರಲ್ಲೇ ನಿಜಾಮನ ಶಾಸನ ಹೋಗಿದೆ. ನೀವು ನಿಜಾಮರ ಉತ್ತರಾಧಿಕಾರಿಗಳಲ್ಲ, ಪ್ರಜಾಪ್ರಭುತ್ವದಲ್ಲಿ ನಿಜಾಮಗಿರಿಯನ್ನು ತೋರಿಸುವ ಪ್ರಯತ್ನ ಮಾಡಬೇಡಿ ಎಂದು ವಿಧಾನ ಪರಿಷತ್ತಿನ ಸದಸ್ಯ ಸಿ.ಟಿ. ರವಿ ಎಚ್ಚರಿಸಿದ್ದಾರೆ.
ಇಂದು ಇಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಗೂಂಡಾಗಿರಿ ನಡೆಯುವುದಕ್ಕೆ ಸಾಧ್ಯವಿಲ್ಲ; ಪ್ರಜಾಪ್ರಭುತ್ವ ಮತ್ತು ಗೂಂಡಾಗಿರಿ ಎರಡು ಒಟ್ಟಿಗೆ ಹೋಗಲು ಸಾಧ್ಯವಿಲ್ಲ. ಒಬ್ಬ ವಿರೋಧ ಪಕ್ಷದ ನಾಯಕರು ರಾಜ್ಯದ ಛಾಯಾ ಮುಖ್ಯಮಂತ್ರಿಗಳು ಎಂದು ಕರೆಯುತ್ತಾರೆ. ಅವರ ಮೇಲೆ ನಿಮ್ಮ ದೌರ್ಜನ್ಯ ಮಾಡಿರುವುದು ಪ್ರಜಾಪ್ರಭುತ್ವದ ದೌರ್ಜನ್ಯಕ್ಕೆ ಸಮ ಎಂದು ಅವರು ತಿಳಿಸಿದರು.
ಸದಾಕಾಲ ಸಂವಿಧಾನದ ಬಗ್ಗೆ ಮಾತನಾಡುವ ಪ್ರಿಯಾಂಕ ಖರ್ಗೆ ರವರೇ, ಸಂವಿಧಾನವನ್ನು ಗೌರವಿಸುವ ನಡವಳೆಕೆ ಇದುವೇ ಎಂದು ಪ್ರಶ್ನಿಸಿದರು. ಘಟನೆ ನಡೆದ ನಂತರ ನೀವು ಪದ್ಮವಿಭೂಷಣ ಕೊಡಬೇಕಿತ್ತಾ; ಪದ್ಮಶ್ರೀ ನೀಡಬೇಕಿತ್ತಾ ಎಂದು ಉತ್ತರ ನೀಡುತ್ತೀರಿ. ಆ ಮೂಲಕ ಹಲ್ಲೆ ನೀವೇ ಮಾಡಿಸಿದ್ದು ಎಂದು ಸಮರ್ಥನೆ ಮಾಡುವ ಕೆಲಸವನ್ನು ಮಾಡಿದ್ದೀರಿ ಎಂದು ಆಕ್ಷೇಪಿಸಿದರು.
ಅಧಿಕಾರದಲ್ಲಿ ಇರುವವರಿಗೆ ಜಾಸ್ತಿ ಜವಾಬ್ದಾರಿ ಇರುತ್ತದೆ. ನಿಮ್ಮ ವರ್ತನೆಯು ಜವಾಬ್ದಾರಿಯುತ ವರ್ತನೆಯಾಗಲಿ. ನಿಮಗೆ ಸಹಜವಾಗಿ ಆಕ್ರೋಶವಿದ್ದರೆ, ನಿಮ್ಮ ತಂದೆಯವರು ಎಐಸಿಸಿ ಅಧ್ಯಕ್ಷರು, ಚುನಾವಣೆ ಸಂದರ್ಭದಲ್ಲಿ ಕೇರಳದ ವೈನಾಡಿನಲ್ಲಿ ನಾಮಪತ್ರ ಸಲ್ಲಿಸಲು ಹೋದಾಗ ಅವರನ್ನು ಹೊರಗಿಡುತ್ತಾರೆ. ಆವಾಗ ನೀವು ಆಕ್ರೋಶÀಗೊಳ್ಳಬೇಕಾಗಿತ್ತು ಎಂದು ತಿಳಿಸಿದರು. ಎಐಸಿಸಿ ಪಕ್ಷದ ಅಧ್ಯಕ್ಷರೆಂದರೆ ಆ ಪಕ್ಷದ ಸುಪ್ರೀಂ, ನಾಮಪತ್ರ ಸಲ್ಲಿಕೆಯ ಸಮಯದಲ್ಲಿ ಮಲ್ಲಿಕಾರ್ಜುನ ಖರ್ಗೆಯವರನ್ನು ಅಸಹಾಯಕರಾಗಿ ಹೊರಗೆ ನಿಲ್ಲಿಸಿದ್ದರು ಎಂದು ನೆನಪಿಸಿದರು.
ಮಲ್ಲಿಕಾರ್ಜುನ ಖರ್ಗೆ ರವರ ರಾಜಕೀಯ ಹಿರಿತನ, ವಯೋಹಿರಿತನ ಎರಡಕ್ಕೂ ಕಾಂಗ್ರೆಸ್ ಪಕ್ಷವು ಗೌರವಕೊಟ್ಟಿಲ್ಲ ಎಂದು ನಾವು ಕಾಂಗ್ರೆಸ್ ಪಕ್ಷದವರಲ್ಲದಿದ್ದರೂ ದುಃಖವಾಯಿತು. ಪ್ರಿಯಾಂಕ ಖರ್ಗೆ ರವರು ಆ ಸಮಯದಲ್ಲಿ ಆಕ್ರೋಶವನ್ನು ತೋರಿಸಿದ್ದರೆ ಅದು ಸಹಜವಾದ ಆಕ್ರೋಶವಾಗುತ್ತಿತ್ತು. ನಿಮ್ಮ ಪಕ್ಷದ ಪ್ರಮುಖ ನಾಯಕ ನೋಡೋಣ, ನಾವು ಮುಂದೆ ಸಂವಿಧಾನವನ್ನು ಬದಲಾಯಿಸುತ್ತೇವೆ ಎಂದಾಗ ನೀವು ಆಕ್ರೋಶವನ್ನು ಹೊರಗೆ ಹಾಕಿದ್ದರೆ. ಅದು ಸಹಜ ಆಕ್ರೋಶವಾಗುತಿತ್ತು, ಸಂವಿಧಾನದ ಕಳಕಳಿಯ ಆಕ್ರೋಶವಾಗುತಿತ್ತು. ಆದರೆ ನಿಮ್ಮ ಬಾಯಿಯಲ್ಲಿ ಪದವೇ ಬರಲಿಲ್ಲ ಎಂದು ಟೀಕಿಸಿದರು.
ಈಗ ನೀವು ನಿಜಾಮಗಿರಿ ತೋರಿಸುವುದಕ್ಕೆ ಹೊರಟಿದ್ದೀರ ಎಂದು ಪ್ರಶ್ನಿಸಿದರು. ನಿಜಾಮ ಶಾಹಿ ನಡೆಯುವುದಿಲ್ಲ. ಪ್ರಸ್ತುತ ಇರುವುದು ಪ್ರಜಾಪ್ರಭುತ್ವ ಎಂದು ತಿಳಿಸಿದರು. ನಿಮ್ಮ ನಿಜಾಮ ಶಾಹಿಯ ವರ್ತನೆಯನ್ನು ಕಳಚಿಕೊಂಡರೆ ಪ್ರಜಾಪ್ರಭುತ್ವದಲ್ಲಿ ನಿಮ್ಮ ಬೆಳವಣಿಗೆ ಆಗುತ್ತದೆ. ನಿಜಾಮ ಶಾಹಿಯ ವರ್ತನೆಯನ್ನೇ ನೀವು ಮುಂದುವರೆಸಿದರೆ ನಿಮ್ಮ ಬೆಳವಣಿಗೆ ಆಗುವುದಿಲ್ಲ. ಉದಾಹರಣೆಗೆ ತುರ್ತು ಪರಿಸ್ಥಿತಿ ಹೇರಿದವರನ್ನು ಹೀನಾಯವಾಗಿ ಸೋಲಿಸಿತು ಮತ್ತು ದೇಶ ತುರ್ತು ಪರಿಸ್ಥಿತಿಗೆ ಉತ್ತರ ಕೊಟ್ಟಿದೆ. 1977 ರಾಯಬಾರಿ ಕ್ಷೇತ್ರದಲ್ಲಿ ಇಂದಿರಾ ಈಸ್ ಇಂಡಿಯಾ ಎಂದು ಹೇಳಿಸಿಕೊಂಡವರು ಪ್ರಜಾಪ್ರಭುತ್ವದ ಹೊಡೆತಕ್ಕೆ ನೆಲಕಚ್ಚಿ ಹೋದರು. ಅದು ಜನ ಕೊಡುವುದು ತೀರ್ಪು. ನಿಮ್ಮ ಈ ಗೂಂಡಾಗಿರಿಗೂ ಕೂಡ ಜನ ಅಂತಹದೇ ತೀರ್ಪು ನೀಡುತ್ತಾರೆ. ನಿಮ್ಮ ವರ್ತನೆಯನ್ನು ಸುಧಾರಿಸಿಕೊಳ್ಳಿ ಎಂದು ಅವರು ತಿಳಿಸಿದರು.
ವಿಧಾನ ಪರಿಷತ್ತಿನ ವಿಪಕ್ಷದ ನಾಯಕರು ಗಾದೆ ಮಾತನ್ನು ಹೇಳಿದ್ದು, ಅದು ಲೋಕ ನುಡಿಯಲ್ಲಿರುವ ಮಾತು; ಕಾರಣವಿಲ್ಲದೆ ಟೀಕೆ ಮಾಡಿದರೆ ಬಳಸುವ ಮಾತದು. ಕಾರಣವಿದ್ದು ಟೀಕೆ ಮಾಡುವುದು ಬೇರೆ, ಕಾರಣವಿಲ್ಲದೆ ಟೀಕೆ ಮಾಡುವುದು ಬೇರೆ ಎಂದು ಅವರು ತಿಳಿಸಿದರು.
ಭಾರತದ ಸಂಸ್ಕøತಿಯಲ್ಲಿ ನಾಯಿಗೆ ವಿಶೇಷವಾದ ಸ್ಥಾನವಿದೆ. ನಿಯತ್ತಿಗೆ ಹೆಸರಾಗಿರುವುದು. ದೇಶದ ವಿಷಯದಲ್ಲೂ ಟೀಕೆ ಮಾಡುವವರನ್ನು ನಾನು ನಿಯತ್ತಿನವರು ಎಂದು ನಾನು ಭಾವಿಸುವುದಿಲ್ಲ ಅಥವಾ ಯಾರಿಗೆ ನಿಯತ್ತು ಇದೆ ಎಂಬುದು ಒಂದು ಪ್ರಶ್ನಾರ್ಥಕ ಚಿಹ್ನೆ ಎಂದು ತಿಳಿಸಿದರು.
ಕಲಬುರ್ಗಿಯನ್ನು ರಿಪಬ್ಲಿಕ್ ಆಫ್ ಕಲಬುರ್ಗಿಯನ್ನಾಗಿ ಮಾಡುತ್ತೇವೆ ಎಂದು ಯಾರಾದರೂ ಭಾವಿಸಿದ್ದರೆ ಅದು ನಡೆಯದು. ಈ ಕಲಬುರ್ಗಿಯ ಜನ ರಜಾಕಾರರ ವಿರುದ್ಧ ಹೋರಾಟ ಮಾಡಿದವರು. ಇಸ್ಲಾಂ ರಿಪಬ್ಲಿಕ್ ಮಾಡುವುದಕ್ಕೆ ಹೊರಟವರನ್ನೇ ಮಣ್ಣು ಮುಕ್ಕಿಸಿದ ಗಂಡು ಮೆಟ್ಟಿದ ನೆಲವಿದು. ರಿಪಬ್ಲಿಕ್ ಆಫ್ ಕಲಬುರ್ಗಿಯನ್ನಾಗಿ ಮಾಡಿ ಇದನ್ನು ನಾವೆಲ್ಲಾ ಕುಟುಂಬದ ಆಸ್ತಿ ಎಂದು ಮಾಡಿಕೊಳ್ಳುತ್ತೇವೆ ಎಂದು ಯಾರಾದರು ಭಾವಿಸಿದ್ದರೆ ಅದಕ್ಕೆ ಕಲಬುರ್ಗಿಯ ಜನ ಅವಕಾಶ ಕೊಡುವುದಿಲ್ಲ. ಇನ್ನು ಇಲ್ಲಿ ಹೋರಾಟದ ಕಿಚ್ಚು ಉಳಿದಿದೆ ಎಂದು ಜ್ಞಾಪಿಸಿದರು.
ಅಧಿಕಾರ ದುರುಪಯೋಗಮಾಡಿಕೊಂಡು ಹೋರಾಟಗಾರರನೆಲ್ಲಾ ಮುಗಿಸಬಹುದು ಎಂದು ಯಾರಾದರೂ ಭಾವಿಸಿದ್ದರೆ. ನಿಮ್ಮ ಅಧಿಕಾರ ಎಷ್ಟು ದಿನ ಇರುತ್ತದೆ, ಎಷ್ಟು ದಿನ ಅಧಿಕಾರದಲ್ಲಿ ಇರುತ್ತೀರಿ. ಅಧಿಕಾರವು ಶಾಶ್ವತವೇ ಎಂದು ಪ್ರಶ್ನಿಸಿದರು. ನಾವೇ ಅಧಿಕಾರದಲ್ಲಿ ಇರುತ್ತೇವೆ ಎಂದವರು ಮಣ್ಣಿನಲ್ಲಿ ಮಣ್ಣಾಗಿ ಹೋಗಿದ್ದಾರೆ. ಅಧಿಕಾರ ಯಾರಿಗೂ ಶಾಶ್ವತವಲ್ಲ. ಜನ ಅಧಿಕಾರವನ್ನು ಕೊಡುವುದು ಒಳ್ಳೆಯ ಕೆಲಸ ಮಾಡುವುದಕ್ಕೆ, ಒಳ್ಳೆ ಕೆಲಸಗಳ ಹೆಜ್ಜೆ ಗುರುತುಗಳನ್ನು ಬಿಟ್ಟು ಹೋಗಲು ಅಧಿಕಾರ ಕೊಡುವುದು. ಅಹಂಕಾರದಲ್ಲಿ ಮೆರೆಯುವುದಕ್ಕಲ್ಲ ದರ್ಪ ತೋರಿಸುವುದಕ್ಕಲ್ಲ, ನಿಜಾಮರ ಪ್ರತಿರೂಪವೆಂದು ಹೇಳಿ ಪರಿಭಾವಿಸವುದಕ್ಕಲ್ಲ ಜನರು ಅಧಿಕಾರ ಕೊಡುವುದು ಎಂದು ಟೀಕಿಸಿದರು.
ಪ್ರಿಯಾಂಕ ಖರ್ಗೆ ರವರು ಜವಾಬ್ದಾರಿಯಿಂದ ವರ್ತನೆ ಮಾಡಬೇಕು, ಗೂಂಡಾಗಿರಿಯನ್ನು ಯಾರೂ ಕೂಡ ಸಹಿಸುವುದಿಲ್ಲ, ಒಪ್ಪಿಕೊಳ್ಳುವುದಿಲ್ಲ. ಅಧಿಕಾರ ದರ್ಪ ತೋರಿಸುವುದನ್ನು ಬಿಡಿ. ಅಧಿಕಾರವನ್ನ ಸದ್ಬಳಕೆ ಮಾಡಿ ಒಳ್ಳೆ ಕೆಲಸ ಮಾಡಿ ಎಂದು ಅವರು ತಿಳಿಸಿದರು.