ದಲಿತರಿಗೆ ತಪ್ಪಿದ ಸಿಎಂ ಸ್ಥಾನ; ಹೆಸರು ಬಹಿರಂಗಕ್ಕೆ ಬಿಜೆಪಿ ಒತ್ತಾಯ

ಸೋಮವಾರ, 25 ಫೆಬ್ರವರಿ 2019 (18:11 IST)
ಕಾಂಗ್ರೆಸ್ನಲ್ಲಿ ಹಲವು ಬಾರಿ ದಲಿತರು ಮುಖ್ಯಮಂತ್ರಿ ಆಗುವುದನ್ನು ತಡೆಯಲಾಗಿದೆ ಎಂದು ಉಪಮುಖ್ಯಮಂತ್ರಿ ಜಿ.ಪರಮೇಶ್ವರ್ ಒಪ್ಪಿಕೊಂಡ ಬೆನ್ನಲ್ಲೇ ಅವಕಾಶ ತಪ್ಪಿಸಿದವರ ಹೆಸರು ಬಹಿರಂಗಪಡಿಸುವಂತೆ ಬಿಜೆಪಿ ಒತ್ತಾಯ ಮಾಡಿದೆ.

ಕಾಂಗ್ರೆಸ್ ನಲ್ಲಿ ಯಾರ ನೇತೃತ್ವದಲ್ಲಿ ಹಾಗೂ ಯಾರು ಹೇಗೆ ದಲಿತರು ಸಿಎಂ ಆಗುವುದನ್ನು ತಡೆದರು ಎಂಬುದನ್ನು ಸ್ಪಷ್ಟಪಡಿಸಬೇಕು ಎಂದು ಸಂಸದ ಪ್ರಹ್ಲಾದ ಜೋಶಿ ಆಗ್ರಹ ಮಾಡಿದ್ದಾರೆ.

ಹುಬ್ಬಳ್ಳಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ನಲ್ಲಿ ಹಲವು ಬಾರಿ ದಲಿತರನ್ನು ಸಿಎಂ ಆಗುವುದರಿಂದ ತಡೆಯಲಾಗಿದೆ ಎಂದು ಜಿ.ಪರಮೇಶ್ವರ್ ಹೇಳಿದ್ದಾರೆ. ಯಾರ ನೇತ್ರತ್ವದಲ್ಲಿ, ಯಾವಾಗ, ಹೇಗೆ ತಡೆದರು ಎಂದು ಜಿ. ಪರಮೇಶ್ವರ್ ಅವರು ಸ್ಪಷ್ಟಪಡಿಸಬೇಕು ಎಂದರು.

ಕಾಂಗ್ರೆಸ್ ಪಕ್ಷ ಅಂಬೇಡ್ಕರ್ ಕಾಲದಿಂದಲೂ ದಲಿತರನ್ನು ತುಳಿಯುವ ಷಡ್ಯಂತ್ರ ಮಾಡಿದೆ. ನೆಹರು ಟೀಮ್ ಮುಂದೆ ನಿಂತು ಅಂಬೇಡ್ಕರ್ ಅವರನ್ನು ಚುನಾವಣೆಯಲ್ಲಿ ಸೋಲಿಸಿದ್ದರು. ಅವರ ಅಂತ್ಯಕ್ರಿಯೆಗೆ ದೆಹಲಿಯಲ್ಲಿ ಜಾಗಕೊಡಲಿಲ್ಲ ಎಂದು ಅವರು ತಿಳಿಸಿದರು.

ಈಗ ಖರ್ಗೆ ಮತ್ತು ಪರಮೇಶ್ವರ್ ಅವರನ್ನು ಸಿಎಂ ಸ್ಥಾನದಿಂದ ವಂಚಿತರನ್ನಾಗಿ ಮಾಡಿದ್ದಾರೆ. ಕಾಂಗ್ರೆಸ್ ಇತಿಹಾಸ ನೋಡಿದಾಗ ದಲಿತ ವಿರೋಧಿ ಎಂದು ಗೊತ್ತಾಗುತ್ತೆ ಎಂದು ಅವರು ಕಾಂಗ್ರೆಸ್ ವಿರುದ್ಧ ಮಾತಿನ ಚಾಟಿ ಬೀಸಿದರು.


ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ