ದಬ್ಬಾಳಿಕೆ ಮೂಲಕ ಕರ ವಸೂಲಿ: ಪ್ರತಿಭಟನೆಗೆ ವ್ಯಾಪಾರಸ್ಥರ ಸಿದ್ಧತೆ
ಗುರುವಾರ, 13 ಸೆಪ್ಟಂಬರ್ 2018 (16:45 IST)
ಗೌರಿ ಗಣೇಶ ಹಬ್ಬದ ಪ್ರಯುಕ್ತ ನಗರದ ಹನುಮಂತಪ್ಪ ವೃತ್ತದ ಬಳಿ ಹಬ್ಬಕ್ಕೆ ಬೇಕಾಗಿರುವ ಎಲ್ಲ ಸಾಮಗ್ರಿಗಳನ್ನು ಒಂದೇ ಕಡೆ ಸಿಗುವಂತೆ ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡುವ ನಿಟ್ಟಿನಲ್ಲಿ ವ್ಯಾಪಾರಸ್ಥರಿಗೆ ಸ್ಥಳಾವಕಾಶ ನಗರಸಭೆಯು ಮಾಡಿಕೊಟ್ಟಿದೆ.
ಚಿಕ್ಕಮಗಳೂರು ನಗರಸಭೆ ವತಿಯಿಂದ ಕರ ವಸೂಲಿ ಮಾಡಲು ನೇಮಕ ಮಾಡಿದ್ದ ವ್ಯಕ್ತಿಯೊಬ್ಬ ದೌರ್ಜನ್ಯದಿಂದ ಕರ ವಸೂಲಿ ಮಾಡಿದ್ದಾನೆ. ನಗರಸಭೆ ನಿಗದಿಪಡಿಸಿರುವ ಕರ ಹತ್ತು ರೂಪಾಯಿ ಆಗಿದ್ದರೆ. ಈತ ವಸೂಲಿ ಮಾಡುತ್ತಿದ್ದದ್ದು ಐವತ್ತರಿಂದ ನೂರು ರೂಪಾಯಿ. ಯಾಕೆ ಸ್ವಾಮಿ ಹೀಗೆ ಅಂತ ವ್ಯಾಪಾರಸ್ಥರು ಕೇಳಿದ್ದಕ್ಕೆ ಅವರಿಗೆ ದಬ್ಬಾಳಿಕೆಯಿಂದ ಹೆದರಿಸಿ ಮುಂದೆ ನೀನು ಎಲ್ಲಿ ವ್ಯಾಪಾರ ಮಾಡುತ್ತೀಯಾ? ಹೇಗೆ ವ್ಯಾಪಾರ ಮಾಡುತ್ತೀಯಾ? ನಾನು ನೋಡಿಕೊಳ್ಳುತ್ತೇನೆ ಎಂಬಂತಹ ದಬ್ಬಾಳಿಕೆಯ ಮಾತು ಆಡುವುದರ ಜೊತೆಗೆ ನಿನ್ನನ್ನು ನೋಡಿಕೊಳ್ಳುತ್ತೇನೆ ಎಂದು ಬೆದರಿಕೆಯನ್ನು ಹಾಕಿದ್ದಾನೆ. ಈತನ ವಿರುದ್ಧ ಸ್ಥಳೀಯ ಎಲ್ಲ ವ್ಯಾಪಾರಸ್ಥರು ಒಟ್ಟುಗೂಡಿ ನಗರಸಭೆಗೆ ಮುಂದೆ ಸಂಘಟನೆಗಳ ಬೆಂಬಲದೊಂದಿಗೆ ಪ್ರತಿಭಟನೆಗೆ ಸಿದ್ಧತೆ ನಡೆಸಲಾಗುತ್ತಿದೆ.
ಹೆಚ್ಚಿನ ಕರ ವಸೂಲಿ ಮಾಡುತ್ತಿರುವವನ ವಿರುದ್ಧ ಪೊಲೀಸ್ ಇಲಾಖೆಗೆ ದೂರನ್ನು ನೀಡುವುದಕ್ಕೆ ವ್ಯಾಪಾರಿಗಳು ಮುಂದಾಗಿದ್ದಾರೆ. ಬಡವರ ಮೇಲೆ, ಫುಟ್ಪಾತ್ ವ್ಯಾಪಾರಿಗಳ ಮೇಲೆ ಈ ರೀತಿ ದಬ್ಬಾಳಿಕೆ ಮಾಡುವುದು ಎಷ್ಟರ ಮಟ್ಟಿಗೆ ಸರಿ ಎಂಬ ಮಾತು ಕೇಳಿ ಬರುತ್ತಿದೆ.