ಬೆಂಗಳೂರು: ಕರ್ನಾಟಕ ಮಾಜಿ ಡಿಜಿಪಿ ಓಂ ಪ್ರಕಾಶ್ ರಾವ್ ಹತ್ಯೆಯಾಗಿದ್ದು ಹೇಗೆ ಎಂದು ಪೊಲೀಸ್ ವಶದಲ್ಲಿರುವ ಪತ್ನಿ ಪಲ್ಲವಿ ಎಳೆ ಎಳೆಯಾಗಿ ಬಿಚ್ಚಿಟ್ಟಿದ್ದಾರೆ.
ಡಿಜಿಪಿ ಓಂ ಪ್ರಕಾಶ್ ರಾವ್ ಹತ್ಯೆಯಾದ ಬೆನ್ನಲ್ಲೇ ಅವರ ಪತ್ನಿ ಪಲ್ಲವಿ ಮತ್ತು ಪುತ್ರಿ ಕೃತಿಯನ್ನು ವಶಕ್ಕೆ ಪಡೆಯಲಾಗಿತ್ತು. ಕೌಟುಂಬಿಕ ಕಲಹವೇ ಕೊಲೆಗೆ ಕಾರಣ ಎಂದು ಬಲವಾದ ಅನುಮಾನವಿತ್ತು. ಹೀಗಾಗಿ ಅವರನ್ನು ವಶಪಡಿಸಿ ವಿಚಾರಣೆಗೊಳಪಡಿಸಲಾಗಿತ್ತು.
ಇದೀಗ ಪಲ್ಲವಿ ಪೊಲೀಸ್ ವಿಚಾರಣೆ ವೇಳೆ ಹತ್ಯೆಯ ಸಂಪೂರ್ಣ ಮಾಹಿತಿ ಬಿಚ್ಚಿಟ್ಟಿದ್ದಾರೆ. ಕಳೆದ ಒಂದು ವಾರದಿಂದ ಮನೆಯಲ್ಲಿ ನಿತ್ಯವೂ ಜಗಳ ನಡೆಯುತ್ತಿತ್ತು. ಪದೇ ಪದೇ ಗನ್ ತಂದು ನನಗೆ, ನನ್ನ ಮಗಳಿಗೆ ಬೆದರಿಕೆ ಹಾಕುತ್ತಿದ್ದರು. ಶೂಟ್ ಮಾಡುವುದಾಗಿ ಹೆದರಿಸುತ್ತಿದ್ದರು. ಬೆಳಿಗ್ಗೆಯಿಂದ ಬೇರೆ ಬೇರೆ ವಿಚಾರಕ್ಕೆ ಮನೆಯಲ್ಲಿ ಜಗಳವಾಗಿದೆ.
ಮಧ್ಯಾಹ್ನದ ವೇಳೆ ಜಗಳ ತಾರಕಕ್ಕೇರಿತ್ತು. ಅವರು ನಮ್ಮನ್ನೇ ಕೊಲೆ ಮಾಡಲು ಯತ್ನಿಸಿದರು. ನಮ್ಮ ಆತ್ಮರಕ್ಷಣೆಗಾಗಿ ಖಾರದ ಪುಡಿ ಅಡುಗೆ ಎಣ್ಣೆ ಹಾಕಿದೆವು. ಬಳಿಕ ಅವರ ಕೈ ಕಾಲು ಕಟ್ಟಿ ಚಾಕುವಿನಿಂದ ಚುಚ್ಚಿದೆವು. ತೀವ್ರ ರಕ್ತಸ್ರಾವದಿಂದ ಓಂ ಪ್ರಕಾಶ್ ಸಾವನ್ನಪ್ಪಿದ್ದಾರೆ ಎಂದು ಪಲ್ಲವಿ ವಿವರಿಸಿದ್ದಾರೆ.
ಇದೀಗ ಓಂ ಪ್ರಕಾಶ್ ಸಾವಿನಲ್ಲಿ ಮಗಳ ಕೈವಾಡವಿದೆಯೇ ಎಂದೂ ತನಿಖೆ ನಡೆಸಲಾಗುತ್ತಿದೆ. ಸದ್ಯಕ್ಕೆ ಅಧಿಕೃತವಾಗಿ ಯಾರನ್ನೂ ಬಂಧಿಸಿಲ್ಲ. ಆದರೆ ವಶಕ್ಕೆ ಪಡೆದು ವಿಚಾರಣೆಗೊಳಪಡಿಸಲಾಗುತ್ತಿದೆ.