ಬಿಸಿಲೂರಿಗೆ ಆಲಮಟ್ಟಿ ಜಲಾಶಯದಿಂದ ನೀರು ಹರಿಸಿ ಎಂದ ಡಿಸಿ

ಶನಿವಾರ, 22 ಜೂನ್ 2019 (14:18 IST)
ಬಿಸಿಲೂರು ಖ್ಯಾತಿಯ ಜಿಲ್ಲೆಗೆ ಆಲಮಟ್ಟಿ ಜಲಾಶಯದಿಂದ 0.50 ಟಿ.ಎಂ.ಸಿ. ನೀರು ಹರಿಸುವಂತೆ ಜಿಲ್ಲಾಧಿಕಾರಿಗಳಿಂದ ಮನವಿ ಸಲ್ಲಿಕೆ ಮಾಡಲಾಗಿದೆ.

ಕಲಬುರಗಿ ಮಹಾನಗರದ ಜನ ಮತ್ತು ಜಾನುವಾರಗಳಿಗೆ ಜುಲೈ-2019ರ ಮಾಹೆಗೆ ಕುಡಿಯುವ ನೀರಿನ ಅಭಾವ ನೀಗಿಸಲು ಆಲಮಟ್ಟಿ ಜಲಾಶಯದಿಂದ ನೀರು ಹರಿಸಬೇಕು. ಆಲಮಟ್ಟಿ ಜಲಾಶಯದಿಂದ ನಾರಾಯಣಪೂರ ಜಲಾಶಯ ಮಾರ್ಗವಾಗಿ ಜೇವರ್ಗಿ ಶಾಖಾ ಕಾಲುವೆ ಮುಖಾಂತರ ನಗರಕ್ಕೆ ನೀರು ಸರಬರಾಜು ಮಾಡುವ ಸರಡಗಿ ಬ್ಯಾರೇಜ್‍ಗೆ 0.50 ಟಿ.ಎಂ.ಸಿ. ನೀರು ಹರಿಸಬೇಕು. ಹೀಗಂತ ಜಿಲ್ಲಾಧಿಕಾರಿ ಆರ್.ವೆಂಕಟೇಶ ಕುಮಾರ ಅವರು ಪ್ರಾದೇಶಿಕ ಆಯುಕ್ತ ಸುಬೋಧ ಯಾದವ ಅವರಿಗೆ ಪತ್ರ ಬರೆದಿದ್ದಾರೆ.

ಕಲಬುರಗಿ ನಗರಕ್ಕೆ ನೀರು ಪೂರೈಸಲು ಕಳೆದ ಮೇ-29 ರಿಂದ ಜೂನ್-2ರ ವರೆಗೆ ನಾರಾಯಣಪುರ ಜಲಾಶಯದಿಂದ ಸರಡಗಿ ಬ್ಯಾರೇಜ್‍ಗೆ ಹರಿಸಲಾದ ನೀರು ಪ್ರಸ್ತುತ ಸಂಗ್ರಹಣೆಯಲ್ಲಿದ್ದು, ಅದು ಜೂನ್-2019ರ ಮಾಹೆಯವರೆಗೆ ಸಾಕಾಗುತ್ತದೆ.

ಜುಲೈ ಮಾಹೆಯಲ್ಲಿ ನೀರಿನ ಸಮಸ್ಯೆ ತಲೆದೋರಬಹುದು ಎಂಬ ಮುಂದಾಲೋಚನೆಯಿಂದ ಜೂನ್ 28 ರಿಂದಲೇ ಆಲಮಟ್ಟಿ ಜಲಾಶಯದಿಂದ 0.50 ಟಿ.ಎಂ.ಸಿ ನೀರು ಹರಿಸಲು ಕೃಷ್ಣ ಭಾಗ್ಯ ಜಲ ನಿಗಮ ಅಧಿಕಾರಿಗಳಿಗೆ ನಿರ್ದೇಶನ ನೀಡಬೇಕು ಎಂದು ಅವರು ಪತ್ರದಲ್ಲಿ ಕೋರಿದ್ದಾರೆ.


ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ