ಸಂಸದರಾದರೂ ವೈದ್ಯ ವೃತ್ತಿ ಮರೆಯದ ಡಾ ಮಂಜುನಾಥ್: ಉಚಿತ ಚಿಕಿತ್ಸೆ ಮೂಲಕ ರೋಗಿಯ ಪ್ರಾಣ ಉಳಿಸಿದರು

Krishnaveni K

ಶುಕ್ರವಾರ, 23 ಆಗಸ್ಟ್ 2024 (14:53 IST)
ಬೆಂಗಳೂರು: ಜಯದೇವ ಆಸ್ಪತ್ರೆಯ ಮಾಜಿ ನಿರ್ದೇಶಕ ಡಾ ಸಿಎನ್ ಮಂಜುನಾಥ್ ಈಗ ತಮ್ಮ ಹುದ್ದೆಯಿಂದ ನಿವೃತ್ತರಾಗಿದ್ದು, ಇತ್ತೀಚೆಗೆ ನಡೆದ ಲೋಕಸಭೆ ಚುನಾವಣೆಯಲ್ಲಿ ಸಂಸದರಾಗಿ ಆಯ್ಕೆಯಾಗಿದ್ದಾರೆ. ಆದರೆ ಸಂಸದರಾದರೂ ಮಂಜುನಾಥ್ ತಮ್ಮ ವೈದ್ಯ ವೃತ್ತಿ ಮರೆತಿಲ್ಲ.

ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದ ಡಾ ಮಂಜುನಾಥ್ ಭರ್ಜರಿಯಾಗಿ ಗೆದ್ದು ಈಗ ಸಂಸದರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಆದರೆ ಹಾಗಿದ್ದರೂ ಅವರು ತಮ್ಮ ವೈದ್ಯ ವೃತ್ತಿಯನ್ನು ಮರೆತಿಲ್ಲ ಈಗಲೂ ವಾರದಲ್ಲಿ ಕೆಲವು ಗಂಟೆಗಳ ಕಾಲ ಉಚಿತ ಚಿಕಿತ್ಸೆ ನೀಡುವ ಮೂಲಕ ರೋಗಿಗಳಿಗೆ ನೆರವಾಗುತ್ತಿದ್ದಾರೆ.

ಇದೀಗ ಡಾ ಸಿಎನ್ ಮಂಜುನಾಥ್ 54 ವರ್ಷದ ಹೃದಯದ ರಕ್ತನಾಳಗಳು ಬ್ಲಾಕ್ ಆಗಿದ್ದ ವ್ಯಕ್ತಿಗೆ ಆಂಜಿಯೋಪ್ಲಾಸ್ಟಿ ಮಾಡುವ ಮೂಲಕ ಅವರ ಜೀವ ಉಳಿಸುವ ಕೆಲಸ ಮಾಡಿದ್ದಾರೆ. ಈ ವ್ಯಕ್ತಿಗೆ ಶೇ.90 ರಷ್ಟು ಹೃದಯದ ರಕ್ತನಾಳಗಳು ಬ್ಲಾಕ್ ಆಗಿತ್ತು. ಇದರಿಂದಾಗಿ ಆತನ ಜೀವಕ್ಕೆ ಸಂಚಕಾರ ಎದುರಾಗಿತ್ತು. ಆದರೆ ಡಾ ಮಂಜುನಾಥ್ ಯಶಸ್ವಿಯಾಗಿ ಆಂಜಿಯೋಪ್ಲಾಸ್ಟಿ ನಡೆಸಿ ರೋಗಿಯ ಜೀವ ಉಳಿಸಿದ್ದಾರೆ.

ಸಂಸದರಾದ ಬಳಿಕವೂ ತಮ್ಮ ಮೆಚ್ಚಿನ ವೈದ್ಯ ವೃತ್ತಿಯನ್ನು ಅವರು ಬಿಟ್ಟುಕೊಟ್ಟಿಲ್ಲ. ಈಗಲೂ ವಾರದಲ್ಲಿ ಎರಡು ದಿನ ಕೆಲವು ಗಂಟೆ ಬಡ ರೋಗಿಗಳಿಗೆ ಉಚಿತ ಚಿಕಿತ್ಸೆ ನೀಡುತ್ತಿದ್ದಾರಂತೆ. ಜಯದೇವ ಆಸ್ಪತ್ರೆಯ ನಿರ್ದೇಶಕರಾಗಿದ್ದಾಗ ಎಷ್ಟೋ ಜನರ ಜೀವ ಉಳಿಸಿ ಬಡವರ ಪಾಲಿಗೆ ದೇವರಾಗಿದ್ದರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ