ಡಿ.ಕೆ.ಸುರೇಶ್ ಹೇಳಿಕೆಗೆ ಡೈರೆಕ್ಟ್‌ ಟಾಂಗ್ ಕೊಟ್ಟು ಫೀಲ್ಡ್‌ಗಿಳಿದ ಡಾ.ಮಂಜುನಾಥ್

Sampriya

ಶುಕ್ರವಾರ, 15 ಮಾರ್ಚ್ 2024 (17:32 IST)
Photo Courtesy Facebook
ರಾಮನಗರ:  ಬೆಂಗಳೂರು ಗ್ರಾಮಾಂತರ ಕ್ಷೇತ್ರದಿಂದ ಬಿಜೆಪಿ ಪಕ್ಷದಿಂದ ಕಣಕ್ಕಿಳಿದಿರುವ ಖ್ಯಾತ ಹೃದ್ರೋಗ ತಜ್ಞ ಡಾ. ಮಂಜುನಾಥ್ ಅವರು ಚುನಾವಣಾ ಅಖಾಡಕ್ಕೆ  ಇಳಿದಿದ್ದಾರೆ. ಇಂದು ಮಾಧ್ಯಮಗಳ ಮುಂದೆ ಕುಟುಂಬ ರಾಜಕೀಯ ಎಂದಿದ್ದ ಸಂಸದ ಡಿ.ಕೆ.ಸುರೇಶ್‌ಗೆ ಡೈರೆಕ್ಟ್‌ ಆಗಿ ಟಾಂಗ್ ನೀಡಿದ್ದಾರೆ. 
 
ಈ ವೇಳೆ ಮಾತನಾಡಿದ ಅವರು,  ನಾನು ಕೆಲಸದ ಮಧ್ಯೆ ರಾಜಕೀಯಕ್ಕೆ ಬಂದಿಲ್ಲ. 40 ವರ್ಷ ದೀರ್ಘ ಕಾಲ ಹೃದ್ರೋಗ ಚಿಕಿತ್ಸಾ ಕೆಲಸ ಮಾಡಿ ನಂತರ ನಾನು ರಾಜಕೀಯಕ್ಕೆ ಬಂದಿದ್ದೇನೆ ಎಂದು ಸಂಸದ ಡಿ.ಕೆ.ಸುರೇಶ್ ಹೇಳಿಕೆಗೆ ಎದುರೇಟು ಕೊಟ್ಟರು.
 
ನಾನು ರಾಮನಗರಕ್ಕೆ ಬಂದಿದ್ದು ಕಾಂಗೋ ಆಸ್ಪತ್ರೆಯ ಉದ್ಘಾಟನೆಗಾಗಿ. ಆದರೆ ಕಾಕತಾಳಿಯಂತೆ ರಾಮನಗರದಲ್ಲಿ ಬಿಜೆಪಿ ಕಾರ್ಯಕರ್ತರ ಸಭೆ ನಡೆಯುತ್ತಿದೆ. ಈ ವೇಳೆ ಜೆಡಿಎಸ್ ಹಾಗೂ ಬಿಜೆಪಿ ಕಾರ್ಯಕರ್ತರನ್ನು ಭೇಟಿಯಾಗುವ ಅವಕಾಶ ದೊರಕಿದೆ ಎಂದು ಖುಷಿ ವ್ಯಕ್ತಪಡಿಸಿದರು.
 
ಜೆಡಿಎಸ್- ಬಿಜೆಪಿ ಮೈತ್ರಿಯೊಂದಿಗೆ ಅಧಿಕೃತವಾಗಿ ಈಗಾಗಲೇ ಪ್ರಚಾರಕ್ಕೆ ಚಾಲನೆ ನೀಡಲಾಗಿದೆ. ರಾಜರಾಜೇಶ್ವರಿ ಕ್ಷೇತ್ರದಲ್ಲಿ ಸಭೆ ಮಾಡಿದ್ದೇವೆ. ಸಂಜೆ ಬೆಂಗಳೂರು ದಕ್ಷಿಣದಲ್ಲಿ ಶಾಸಕ ಕೃಷ್ಣಪ್ಪ ಸಭೆ ಮಾಡುತ್ತಿದ್ದಾರೆ ಎಂದರು.
 
ರಾಜಕೀಯ ಮಾಡಲು ಬಂದಿಲ್ಲ: ನಾನು ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸುತ್ತಿರುವುದು ರಾಜಕೀಯ ಮಾಡಲು ಅಲ್ಲ. ರಾಷ್ಟ್ರಮಟ್ಟಕ್ಕೆ ಬರಲು ವೇದಿಕೆ, ಭೂಮಿಕೆ ಬೇಕಾಗುತ್ತದೆ ಎಂದರು.
 
ಜೆಡಿಎಸ್- ಬಿಜೆಪಿ ಮೈತ್ರಿ ಬಗ್ಗೆ ಪ್ರತಿಕ್ರಿಯಿಸಿದ ಅವರು ಈ ವಿಚಾರ ನಮಗೆ ಸವಾಲೇ ಅಲ್ಲ. ಜೆಡಿಎಸ್ ಬಿಜೆಪಿ ಕಾರ್ಯಕರ್ತರ ಹೃದಯಗಳು ಒಟ್ಟಾಗಿದೆ. ಇಲ್ಲಿ ಯಾವುದೇ ಭಿನ್ನಾಭಿಪ್ರಾಯಗಳಿಲ್ಲ. ಎಲ್ಲರೂ ಖುಷಿಯಾಗಿ ಕೆಲಸ ಮಾಡುತ್ತಿದ್ದೇವೆ ಎಂದರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ