ಬೆಂಗಳೂರು: ರಾಜ್ಯದಲ್ಲಿ ಕೊವಿಡ್ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನಲೆಯಲ್ಲಿ ಶಾಲೆಗಳಿಗೆ ಏನಾದರೂ ಮಾರ್ಗಸೂಚಿ ಇದೆಯೇ ಎಂಬ ಪ್ರಶ್ನೆಗೆ ಶಿಕ್ಷಣ ಸಚಿವ ಮಧು ಬಂಗಾರಪ್ಪ ಪ್ರತಿಕ್ರಿಯಿಸಿದ್ದಾರೆ.
ರಾಜ್ಯದಲ್ಲಿ ಅದರಲ್ಲೂ ವಿಶೇಷವಾಗಿ ಬೆಂಗಳೂರಿನಲ್ಲಿ ಅತೀ ಹೆಚ್ಚು ಕೊರೋನಾ ಪ್ರಕರಣಗಳು ಕಂಡುಬಂದಿವೆ. ಸದ್ಯಕ್ಕೆ ರಾಜ್ಯದಲ್ಲಿ ಸಕ್ರಿಯ ಪ್ರಕರಣಗಳು 50 ರ ಸಮೀಪವಿದೆ. ನಿನ್ನೆಯಷ್ಟೇ ಸಿಎಂ ಸಿದ್ದರಾಮಯ್ಯ ಮತ್ತು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಸಭೆ ನಡೆಸಿದ್ದರು.
ಇದೀಗ ಶಾಲೆ, ಕಾಲೇಜುಗಳಿಗೆ ಏನಾದರೂ ಮಾರ್ಗಸೂಚಿ ಇರಲಿದೆಯಾ ಎಂಬ ಪ್ರಶ್ನೆಗೆ ಮಧು ಬಂಗಾರಪ್ಪ ಪ್ರತಿಕ್ರಿಯಿಸಿದ್ದಾರೆ. ಸದ್ಯಕ್ಕೆ ಶಾಲೆಗಳಿಗೆ ಯಾವುದೇ ಮಾರ್ಗಸೂಚಿ ಇಲ್ಲ. ಆರೋಗ್ಯ ಇಲಾಖೆ ಏನಾದರೂ ಮಾರ್ಗಸೂಚಿ ಕೊಟ್ಟರೆ ಅದನ್ನು ಅನುಷ್ಠಾನಕ್ಕೆ ತರುತ್ತೇವೆ. ಇದುವರೆಗೆ ಆರೋಗ್ಯ ಇಲಾಖೆಯಿಂದ ಯಾವುದೇ ಮಾರ್ಗಸೂಚಿ ಬಂದಿಲ್ಲ ಎಂದಿದ್ದಾರೆ.
ನಿನ್ನೆ ಸಿಎಂ ಸಭೆಯಲ್ಲೂ ಇದೇ ತೀರ್ಮಾನಕ್ಕೆ ಬರಲಾಗಿದೆ. ಸದ್ಯಕ್ಕೆ ಶಾಲೆ, ಕಾಲೇಜುಗಳನ್ನು ಬಂದ್ ಮಾಡಲ್ಲ. ಜ್ವರ, ಶೀತವಿರುವ ಮಕ್ಕಳನ್ನು ಶಾಲೆಗೆ ಕಳುಹಿಸದಿರಿ ಎಂದು ಸೂಚನೆ ನೀಡಲಾಗಿತ್ತು.