ನಕಲಿ ದಾಖಲೆ ಸೃಷ್ಟಿ, ಅಕ್ರಮಗಳಲ್ಲಿ ಭಾಗಿಯಾದರೆ ತಕ್ಕ ಶಾಸ್ತಿ

ಶುಕ್ರವಾರ, 8 ಏಪ್ರಿಲ್ 2022 (20:04 IST)
ದೇವನಹಳ್ಳಿ ತಾಲ್ಲೂಕಿನ ರೆವಿನ್ಯೂ ದಾಖಲೆಗಳ ಬಗ್ಗೆ ಸಾಕಷ್ಟು ದೂರುಗಳು ಬರುತ್ತಿದ್ದು ತಪ್ಪಿತಸ್ಥ ಅಧಿಕಾರಿಗಳಿಗೆ ತಕ್ಕ ಶಾಸ್ತಿ ಮಾಡಬೇಕಾಗುತ್ತದೆ ಎಂದು ಕೆಡಿಪಿ ಸಭೆಯಲ್ಲಿ ಸಚಿವ ಡಾ. ಕೆ. ಸುಧಾಕರ್‌ ಎಚ್ಚರಿಕೆ ನೀಡಿದರು.
 
ನಕಲಿ ದಾಖಲೆ ಸೃಷ್ಟಿ ಮತ್ತು ಕಳವು ಪ್ರಕರಣಗಳ ಬಗ್ಗೆ ದೂರುಗಳಿವೆ. ಭೂಮಿ ಖರೀದಿಗೆ ಮೀನಾಮೇಷ ಎಣಿಸುವ ಸನ್ನಿವೇಶ ನಿರ್ಮಾಣ ಆಗಿದೆ. ಈ ಬಗ್ಗೆ ನಿರ್ದಿಷ್ಟ ದೂರುಗಳು ಬಂದಿವೆ. ತನಿಖೆ ಸಂದರ್ಭದಲ್ಲಿ ಯಾರೇ ಆದರೂ ತಪ್ಪಿತಸ್ಥರೆಂದು ಕಂಡು ಬಂದಲ್ಲಿ ನಿರ್ದಾಕ್ಷಿಣ್ಯ ಕ್ರಮ ಜರುಗಿಸಲಾಗುವುದು. ಜಿಲ್ಲಾಧಿಕಾರಿಗಳು ಈ ಬಗ್ಗೆ ಗಂಭೀರವಾಗಿ ಪರಿಶೀಲನೆ ನಡೆಸಬೇಕು ಎಂದು ಸೂಚನೆ ನೀಡಿದರು.
 
ಕಂದಾಯ ಇಲಾಖೆಯ ಎಲ್ಲಾ ದಾಖಲೆಗಳನ್ನು ಡಿಜಿಟಲೀಕರಣಗೊಳಿಸಬೇಕು. ಪ್ರಮುಖ ದಾಖಲೆಗಳು ಇರುವ ಕೊಠಡಿಗಳಿಗೆ ಅಧಿಕೃತ ಸಿಬ್ಬಂದಿ ಹೊರತು ಬೇರೆಯವರ ಪ್ರವೇಶ ನಿರ್ಬಂಧಿಸಬೇಕು. ನಿಯಮಿತವಾಗಿ ಪರಿಶೀಲನೆ ನಡೆಸಬೇಕು. ನಕಲಿ ದಾಖಲೆ ಸೃಷ್ಟಿಕೋರರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಜರುಗಿಸಿದರೆ ಇಂತಹ ಪ್ರಕರಣಗಳು ಮರುಕಳಿಸುವುದಿಲ್ಲ ಎಂದು ಅಧಿಕಾರಿಗಳಿಗೆ ಕಿವಿಮಾತು ಹೇಳಿದರು.
ಸಭೆಯಲ್ಲಿ ನಕಲಿ ದಾಖಲೆ ಮತ್ತು ಅಕ್ರಮಗಳ ಬಗ್ಗೆ ಚುನಾಯಿತ ಪ್ರತಿನಿಧಿಗಳಿಂದ ವ್ಯಾಪಕ ದೂರುಗಳು ಬಂದ ಹಿನ್ನಲೆಯಲ್ಲಿ ಸಾರ್ವಜನಿಕರಿಗೆ ತೊಂದರೆ ಆಗದಂತೆ ಎಚ್ಚರವಹಿಸುವ ಜತೆಗೆ ಅಕ್ರಮಗಳಿಗೂ ಕಡಿವಾಣ ಹಾಕಬೇಕು ಎಂದು ಸೂಚಿಸಿದರು. 
ನಾಲ್ಕು ಮಂದಿ ತಹಸೀಲ್ದಾರ್‌ಗಳ ವ್ಯಾಪ್ತಿಗೆ ಸೇರಿದ ದಾಖಲೆಗಳನ್ನು ನಿಯಮಿತವಾಗಿ ಪರಿಶೀಲನೆ ನಡೆಸಬೇಕು ಮತ್ತು ಲೋಪಗಳು ಕಂಡು ಬಂದಿಲ್ಲಿ ಮುಲಾಜಿಲ್ಲದೆ ಕ್ರಮ ಜರುಗಿಸಬೇಕು ಮತ್ತು ತಮ್ಮ ಗಮನಕ್ಕೂ ತರಬೇಕು ಎಂದು ಉಪ ವಿಭಾಗಾಧಿಕಾರಿಗಳಿಗೆ ಸೂಚನೆ ನೀಡಿದರು.
ಸಬ್‌ ರಿಜಿಸ್ಟ್ರಾರ್‌ ಕಚೇರಿಗಳಲ್ಲಿ ಜನಸಂದಣಿ ದಟ್ಟಣೆ ಹೆಚ್ಚಿರುವ ದೊಡ್ಡಬಳ್ಳಾಪುರ, ದೇವನಹಳ್ಳಿ, ಹೊಸಕೋಟೆ ಮತ್ತು ನೆಲಮಂಗಲಗಳಲ್ಲಿ ಅತ್ಯುತ್ತಮ ಸೌಲಭ್ಯದ ರಿಜಿಸ್ಟ್ರಾರ್‌ ಕಚೇರಿಗಳನ್ನು ನಿರ್ಮಿಸಿಕೊಡುವ ಬಗ್ಗೆ ಕಂದಾಯ ಸಚಿವರ ಜತೆ ಮಾತುಕತೆ ನಡೆಸುವುದಾಗಿ ಸಚಿವರು ಸ್ಪಷ್ಟಪಡಿಸಿದರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ