ನವರಾತ್ರಿ ಸಮಯದಲ್ಲಿ ರಾಜಮನೆತನಕ್ಕೆ ಎಂದೂ ಹೀಗಾಗಿರಲಿಲ್ಲ: ಅರಮನೆಯಲ್ಲಿ ನಡೆಯುತ್ತಿದೆ ಭಾರೀ ಚರ್ಚೆ

Krishnaveni K

ಶುಕ್ರವಾರ, 11 ಅಕ್ಟೋಬರ್ 2024 (16:14 IST)
ಮೈಸೂರು: ದಸರಾ ಸಮಯದಲ್ಲಿ ಹಿಂದೆಂದೂ ಆಗಿರದಂತಹ ಸನ್ನಿವೇಶ ಈ ಬಾರಿ ಮೈಸೂರು ರಾಜವಂಶಸ್ಥರಿಗೆ ಆಗಿದೆ. ಈ ಹಿನ್ನಲೆಯಲ್ಲಿ ರಾಜಪುರೋಹಿತರು ಚರ್ಚೆ ನಡೆಸುತ್ತಿದ್ದಾರೆ.

ರಾಜ ಯದುವೀರ್ ಕೃಷ್ಣದತ್ತ ಒಡೆಯರ್ ಗೆ ಇಂದು ಎರಡನೇ ಮಗುವಿನ ಜನನವಾಗಿದೆ. ಅದೂ ನವರಾತ್ರಿ ಸಂದರ್ಭದಲ್ಲೇ ಆಗಿದೆ ಎಂದು ಜನ ಸಂಭ್ರಮಪಡುತ್ತಿದ್ದರೆ ಇನ್ನೊಂದೆಡೆ ರಾಜವಂಶಸ್ಥರಿಗೆ ಅಶೌಚ ಸೂತಕ ಎದುರಾಗಿದೆ. ಅಶೌಚವಿದ್ದಾಗ ಪೂಜಾ ಕಾರ್ಯಗಳಲ್ಲಿ ಭಾಗಿಯಾಗುವುದು ಹೇಗೆ ಎಂಬ ಸಂಕಟ ಎದುರಾಗಿದೆ.

ರಾಜಮನೆತನದಲ್ಲಿ ಎಂದೂ ದಸರಾ ಹಬ್ಬದ ಸಂದರ್ಭದಲ್ಲಿಯೇ ಮಗು ಜನಿಸಿದ ಉದಾಹರಣೆಗಳು ವಿರಳ. ಆದರೆ ಈ ಬಾರಿ ರಾಜ ಪೀಠಸ್ಥ ಯದುವೀರ್ ಗೆ ಎರಡನೆಯ ಪುತ್ರ ಜನಿಸಿದ್ದಾನೆ. ಈ ಕಾರಣಕ್ಕೆ ರಾಜವಂಶಸ್ಥರಲ್ಲಿ ಸಂಭ್ರಮ ಮನೆ ಮಾಡಿದೆ. ಆದರೆ ಅದರ ನಡುವೆ ದಸರಾ ಸಾಂಪ್ರದಾಯಿಕ ವಿಧಿ ವಿಧಾನದಲ್ಲಿ ಯದುವೀರ್ ಭಾಗಿಯಾಗಬಹುದೇ, ಅವರಲ್ಲದೇ ಇದ್ದರೆ ಅದನ್ನು ಮಾಡುವವರು ಯಾರು ಎಂಬ ಪ್ರಶ್ನೆ ಮೂಡಿದೆ.

ಆದರೆ ರಾಜಪುರೋಹಿತರೊಂದಿಗೆ ಯದುವೀರ್ ಸುದೀರ್ಘ ಚರ್ಚೆ ನಡೆಸಿದ್ದಾರೆ. ದಸರಾ ಕಾರ್ಯಕ್ರಮದಲ್ಲಿ ಭಾಗಿಯಾಗಲು ಯದುವೀರ್ ಕಂಕಣ ಧಾರಣೆ ಮಾಡಿದ್ದಾರೆ. ಕಂಕಣ ಧಾರಣೆ ಮಾಡಿದಾಗ ಯಾವುದೇ ಅಶೌಚಗಳು ಲೆಕ್ಕಕ್ಕೆ ಬರುವುದಿಲ್ಲ. ರಾಜವಂಶದ ಇತರರಿಗೆ ಸೂತಕವಿದ್ದರೂ ಕಂಕಣ ಧಾರಣೆ ಮಾಡಿದ ಕಾರಣಕ್ಕೆ ಯದುವೀರ್ ಸಾಂಪ್ರದಾಯಿಕ ಕಾರ್ಯಗಳಲ್ಲಿ ಭಾಗಿಯಾಗುತ್ತಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ