ಕಳೆದ ಎರಡು - ಮೂರು ದಿನಗಳಿಂದ ಸುರಿಯುತ್ತಿರುವ ಮಳೆಯಿಂದ ಜನಜೀವನ ಅಸ್ತವ್ಯಸ್ತಗೊಂಡಿದೆ. ನಿತ್ಯದ ಜೀವನದ ಜೊತೆಗೆ ಅಂತ್ಯಸಂಸ್ಕಾರಕ್ಕೂ ಮಳೆ ಸಂಕಷ್ಟ ತಂದೊಡ್ಡಿದೆ.
ಧಾರಾಕಾರ ಮಳೆಯಿಂದಾಗಿ ತಾಲೂಕಿನ ಶಿರಗುಪ್ಪಿ ಗ್ರಾಮದಲ್ಲಿ ಶವ ಸಂಸ್ಕಾರ ಮಾಡಲು ಮಳೆರಾಯ ಅಡ್ಡಿ ಪಡಿಸಿದ ಹಿನ್ನಲೆಯಲ್ಲಿ ಶವ ಸಂಸ್ಕಾರವನ್ನು ಮುಖ್ಯರಸ್ತೆಯಲ್ಲಿಯೇ ಮಾಡುವ ಪರಿಸ್ಥಿತಿ ನಿರ್ಮಾಣವಾಗಿತ್ತು.
ನಿಧನ ಹೊಂದಿದ್ದ ಇಬ್ಬರ ಅಂತ್ಯಸಂಸ್ಕಾರವನ್ನು ಸ್ಮಶಾನದ ಸ್ಥಳದಲ್ಲಿ ನೆರವೇರಿಸಲು ಮಳೆರಾಯ ಅಡ್ಡಿಪಡಿಸಿದ್ದರಿಂದ ಅಲ್ಲದೇ ಗ್ರಾಮದ ಪಕ್ಕದಲ್ಲಿರುವ ಬೆಣ್ಣೆಹಳ್ಳ ಮೈದುಂಬಿ ಹರಿಯುತ್ತಿದ್ದರಿಂದ ಅಂತ್ಯಸಂಸ್ಕಾರವನ್ನು ಗದಗ - ಹುಬ್ಬಳ್ಳಿ ರಸ್ತೆ ಪಕ್ಕದಲ್ಲಿ ಮಾಡುವಂತಾಯಿತು. ಇದನ್ನು ನೋಡಿದ ದಾರಿಹೋಕರು ಇದೇನಪ್ಪಾ? ಅಂತ ಮರುಕಪಟ್ಟರು.
ಇಂತಹ ಸಮಸ್ಯೆ ಬರೀ ಶಿರಗುಪ್ಪಿ ಗ್ರಾಮದಲ್ಲಿ ಮಾತ್ರ ಇಲ್ಲ. ಜಿಲ್ಲೆಯ ಹಲವಾರು ಗ್ರಾಮಗಳ ಸ್ಮಶಾನದ ಸ್ಥಳಗಳು ಮಳೆಯ ನೀರಿನಿಂದ ಜಲಾವೃತಗೊಂಡಿವೆ. ಅಂತ್ಯಸಂಸ್ಕಾರ ಮಾಡಲು ಮಳೆ ಸಂಕಷ್ಟ ತಂದೊಡ್ಡಿದೆ. ಹೀಗಾಗಿ ಮಳೆರಾಯ ಸಾವಿನಲ್ಲೂ ತೊಂದರೆ ಕೊಡೋದನ್ನು ಬಿಡುತ್ತಿಲ್ಲ ಎಂಬ ಮಾತುಗಳು ಗ್ರಾಮದಲ್ಲಿ ಕೇಳಿಬರುತ್ತಿವೆ.