ಯತ್ನಾಳ್‌ ವಿರುದ್ಧ ಕೆರಳಿ ಕೆಂಡವಾದ ಜಿಟಿಡಿ: ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವ ಸವಾಲು ಹಾಕಿದ್ದೇಕೆ

Sampriya

ಬುಧವಾರ, 22 ಜನವರಿ 2025 (14:32 IST)
Photo Courtesy X
ಮೈಸೂರು: ನಾನು ಭ್ರಷ್ಟಾಚಾರ ಮಾಡಿರೋದನ್ನ ನೀನು ಸಾಬೀತು ಮಾಡಿದರೆ ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಡುತ್ತೇನೆ ಎಂದು ಚಾಮುಂಡೇಶ್ವರಿ ಕ್ಷೇತ್ರದ ಶಾಸಕ ಜಿ.ಟಿ. ದೇವೇಗೌಡ ಅವರು ಬಹಿರಂಗ ಸವಾಲೆಸೆದಿದ್ದಾರೆ.

ಮುಡಾದ ಭ್ರಷ್ಟಾಚಾರದಲ್ಲಿ ತಮ್ಮ ಪಾತ್ರವೂ ಇದೆ ಎಂಬ ಬಿಜೆಪಿ ಶಾಸಕ ಬಸವನಗೌಡ ಯತ್ನಾಳ್‌ ಹೇಳಿಕೆಗೆ ಜಿಟಿಡಿ ಕೆರಳಿ ಕೆಂಡವಾದರು. ಈ ವೇಳೆ ಯತ್ನಾಳ್‌ ವಿರುದ್ಧ ಏಕವಚನದಲ್ಲೇ ಬಹಿರಂಗ ಸವಾಲ್ ಹಾಕಿದರು.

ನೀನು ಸೌಹಾರ್ದ ಬ್ಯಾಂಕಿನ ಹೆಸರಿನಲ್ಲಿ ಹಣ ಡೆಪಾಸಿಟ್ ಮಾಡಿಸಿಕೊಂಡು, ಅದನ್ನ ಎಲ್ಲೆಲ್ಲಿ ಹೂಡಿಕೆ ಮಾಡಿದ್ಯಾ ಎಂಬುದು ನನಗೆ ಗೊತ್ತಿಲ್ವಾ? ಎಲ್ಲವನ್ನೂ ತೆಗೀಬೇಕಾ? ಎಂದ ವಾಗ್ದಾಳಿ ನಡೆಸಿದರು.

ನಾನು ಶಾಸಕನಾಗಿ ಬಂದಾಗ ಇದ್ದ ಆಸ್ತಿಗೂ, ಇವತ್ತಿನ ಆಸ್ತಿಗು ಏನು ವ್ಯತ್ಯಾಸ ಇದೆ ಅನ್ನೋದನ್ನ ನೀನು ತೆಗಿ. ನೀನು ರಾಜಕೀಯಕ್ಕೆ ಬಂದಾಗ ಏನಿತ್ತು? ನಂತರ ನೀನು ಹೇಗೆ ದುಂಡಗಾದೆ? ಸೌಹಾರ್ದ ಬ್ಯಾಂಕಿನ ಹೆಸರಿನಲ್ಲಿ ಹಣ ಡೆಪಾಸಿಟ್ ಮಾಡಿಸಿಕೊಂಡು, ಅದನ್ನ ಎಲ್ಲೆಲ್ಲಿ ಹೂಡಿಕೆ ಮಾಡಿದ್ಯಾ ಎಂಬುದು ನನಗೆ ಗೊತ್ತಿಲ್ವ? ಎಲ್ಲದನ್ನೂ ತೆಗೀಬೇಕಾ? ಯತ್ನಾಳ್‌ಗೆ ಸದಾ ಇನ್ನೊಬ್ಬರ ಬಗ್ಗೆ ಮಾತಾಡುವುದು ಒಂದು ಚಟ. ದಿನವೂ ಅದೇ ಚಟದಲ್ಲಿ ಮಾತಾಡ್ತಾರೆ. ಬೇರೆಯವರಿಗೆ ಮಾತನಾಡಿದಂತೆ ನನ್ನ ಜೊತೆ ಮಾತನಾಡಬೇಡ. ಇದು ನಾನು ನಿನಗೆ ಕೊಡ್ತಿರೋ ಎಚ್ಚರಿಕೆ ಎಂದರು.

ಯತ್ನಾಳ್‌ಗೆ ಎಷ್ಟು ಆಸ್ತಿ ಇತ್ತು. ಈಗ ಎಷ್ಟಾಗಿದೆ ಗೊತ್ತಾ? ಒಬ್ಬರನ್ನು ಇಂದು ಹೊಗಳುವುದು, ನಾಳೆ ತೆಗಳುವುದು ಯತ್ನಾಳ್ ಗೆ ಚಟ. ಯಾವನೋ ಏನೋ ಹೇಳುತ್ತಾನೆ ಅಂತಾ ನನ್ನ ಬಗ್ಗೆ ಮಾತನಾಡಬೇಡಿ. ಹಿರಿಯ ಮನುಷ್ಯ ಇದ್ಯಾ? ಗೌರವ ಇಟ್ಕೊಂಡು ಮಾತನಾಡು. ನಿನ್ನ ಮೇಲೆ ಶುಗರ್ ಫ್ಯಾಕ್ಟರಿ ವಿಚಾರದಲ್ಲಿ ಎಫ್‌ಐಆರ್‌ ಆಗಿರಲಿಲ್ವಾ? ನೀನು ರಾಜೀನಾಮೆ ಕೊಟ್ಯಾ? ಸೌಹಾರ್ದ ಬ್ಯಾಂಕ್ ವಿಚಾರದಲ್ಲಿ ಯತ್ನಾಳ್ ಮೇಲೆ ತನಿಖೆ ಆಗಲಿ ಆಗ ಗೊತ್ತಾಗುತ್ತೆ. ಭ್ರಷ್ಟಾಚಾರಕ್ಕೆ ಇನ್ನೊಂದು ಹೆಸರೇ ಯತ್ನಾಳ್‌ ಎಂದು ಸಿಡಿಮಿಡಿಗೊಂಡರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ