ಅತಿಥಿ ಉಪನ್ಯಾಸಕರಿಗೆ ಸಿಹಿಯಲ್ಲ, ಕಹಿಸುದ್ದಿ

ಶನಿವಾರ, 15 ಜನವರಿ 2022 (21:16 IST)
ಒಂದು ತಿಂಗಳಿನಿಂದ ಪ್ರತಿಭಟನೆ ನಡೆಸುತ್ತಿರುವ ಅತಿಥಿ ಉಪನ್ಯಾಸಕರಿಗೆ ಕಡೆಗೂ ಸಿಹಿಸುದ್ದಿ ನೀಡಲು ಸರಕಾರ ಮುಂದಾಗಿತ್ತು. ತಮ್ಮ ವೇತನ ಹೆಚ್ಚಿಸಿ, ನ್ಯಾಯಯುತ ವೇತನ ಕೊಡಿ ಎಂದು ಪ್ರತಿಭಟನೆ ನಡೆಸಿದವರಿಗೆ ಸರಕಾರ ವೇತನ ಡಬಲ್ ಮಾಡಿ, ಮೇಲ್ನೋಟಕ್ಕೆ ಸಿಹಿಸುದ್ದಿಯನ್ನೇ ನೀಡಿದೆ. ಆದರೆ ಸರಕಾರದ ಈ ಆದೇಶ ಜಾರಿಗೆ ಬಂದರೆ ರಾಜ್ಯದಲ್ಲಿರುವ 14500 ಮಂದಿ ಅತಿಥಿ ಉಪನ್ಯಾಸಕರಲ್ಲಿ ಅರ್ಧಕ್ಕರ್ಧ ಮಂದಿ ಕೆಲಸ ಕಳೆದುಕೊಳ್ಳಲಿದ್ದಾರೆ ಎಂಬ ಆತಂಕಕ್ಕೆ ವ್ಯಕ್ತವಾಗಿದೆ.
ಉನ್ನತ ಶಿಕ್ಷಣ ಇಲಾಖೆಯಿಂದ ಜನವರಿ 14ರಂದು ಅತಿಥಿ ಉಪನ್ಯಾಸಕರ ಬೇಡಿಕೆಯಂತೆ ವೇತನ ಹೆಚ್ಚಿಸಿ ಆದೇಶ ಮಾಡಲಾಗಿದೆ. ಅದರಂತೆ, ಯುಜಿಸಿ ಅರ್ಹತೆ ಅನುಸಾರ 5 ವರ್ಷಕ್ಕಿಂತ ಹೆಚ್ಚು ಕಾಲದಿಂದ ಕೆಲಸ ಮಾಡುತ್ತಿರುವ ಮಂದಿಗೆ 32 ಸಾವಿರ ರೂ. ವೇತನ ಸಿಗಲಿದೆ. ಅಲ್ಲದೆ, 5 ವರ್ಷಕ್ಕಿಂತ ಕಡಿಮೆ ಅವಧಿಯಿಂದ ಕೆಲಸ ಮಾಡುತ್ತಿರುವ, ಯುಜಿಸಿ ಅರ್ಹತೆ (ಪಿಎಚ್ ಡಿ, ಎನ್ಇಟಿ ತೇರ್ಗಡೆ) ಇರುವ ಮಂದಿಗೆ 30 ಸಾವಿರ ಸಂಬಳ ನಿಗದಿಪಡಿಸಲಾಗಿದೆ. ಉಳಿದಂತೆ, ಯುಜಿಸಿ ಅರ್ಹತೆ ಹೊಂದಿರದ ಐದು ವರ್ಷಗಳಿಗಿಂತ ಹೆಚ್ಚು ಕಾಲದಿಂದ ಕೆಲಸ ಮಾಡುತ್ತಿರುವ ಮಂದಿಗೆ 28 ಸಾವಿರ ರೂ. ವೇತನ ನಿಗದಿ ಮಾಡಲಾಗಿದೆ. ಅಲ್ಲದೆ, ಈಗಷ್ಟೇ ಕೆಲಸಕ್ಕೆ ಸೇರಿದವರು ಸೇರಿದಂತೆ, ಐದು ವರ್ಷಕ್ಕಿಂತ ಕಡಿಮೆ ಅವಧಿಯಲ್ಲಿ ಕೆಲಸ ಮಾಡುತ್ತಿರುವ ಯುಜಿಸಿ ಅರ್ಹತೆ ಇರದವರಿಗೆ ತಿಂಗಳಿಗೆ 26 ಸಾವಿರ ರೂ. ವೇತನ ನಿಗದಿ ಮಾಡಲಾಗಿದೆ.
ಅರ್ಧಕ್ಕರ್ಧ ಮಂದಿಗೆ ಕೆಲಸ ಕಳಕೊಳ್ಳುವ ಭೀತಿ
ವೇತನದ ದೃಷ್ಟಿಯಿಂದ ನೋಡಿದರೆ, ರಾಜ್ಯ ಸರಕಾರ ಹೊರಡಿಸಿರುವ ಆದೇಶ ಒಳ್ಳೆಯದೇ ಆಗಿದ್ದರೂ, ಅತಿಥಿ ಉಪನ್ಯಾಸಕರ ಸಂಘಟನೆ ರಾಜ್ಯ ಸರಕಾರದ ಈ ಆದೇಶದ ಬಗ್ಗೆ ಕಿಡಿಕಾರಿದೆ. ಯಾಕಂದ್ರೆ, ರಾಜ್ಯ ಸರಕಾರ ಈ ಆದೇಶವನ್ನು ಜಾರಿ ಮಾಡಿದರೆ ರಾಜ್ಯದಲ್ಲಿರುವ 7500ಕ್ಕೂ ಹೆಚ್ಚು ಮಂದಿ ಕೆಲಸ ಕಳೆದುಕೊಳ್ಳಲಿದ್ದಾರೆ. ಸರಕಾರದ ಆದೇಶ ಪ್ರಕಾರ, ಅತಿಥಿ ಉಪನ್ಯಾಸಕರ ಕರ್ತವ್ಯದ ಅವಧಿಯನ್ನು ಹೆಚ್ಚಿಸಲು ಸೂಚಿಸಲಾಗಿದೆ. ಅಂದರೆ, ಇತರೇ ಪೂರ್ಣಕಾಲಿಕ ಉಪನ್ಯಾಸಕರ ರೀತಿಯಲ್ಲೇ ವಾರಕ್ಕೆ 15 ಗಂಟೆಯ ಕರ್ತವ್ಯಕ್ಕೆ ನೇಮಿಸಿಕೊಳ್ಳಲು ಆದೇಶ ಮಾಡಲಾಗಿದೆ. ಈಮೂಲಕ ಅವರ ಕರ್ತವ್ಯ ಹೆಚ್ಚಿಸಿ, ನಿಗದಿಯಂತೆ ವೇತನ ಪಾವತಿ ಮಾಡುವಂತೆ ಆದೇಶದಲ್ಲಿ ತಿಳಿಸಲಾಗಿದೆ.
ಸದ್ಯಕ್ಕೆ ವಾರಕ್ಕೆ ಎಂಟು ಗಂಟೆಯ ಕರ್ತವ್ಯದ ಅವಧಿ ಮಾತ್ರ ಅತಿಥಿ ಉಪನ್ಯಾಸಕರಿಗಿದೆ. ಇದರಂತೆ, ಈವರೆಗೆ ಯುಜಿಸಿ ಅರ್ಹತೆ ಇರುವ ಮಂದಿಗೆ ತಿಂಗಳಿಗೆ 13500 ರೂ. ಮತ್ತು ಯುಜಿಸಿ ಅರ್ಹತೆ ಹೊಂದಿರದ ಸ್ನಾತಕೋತ್ತರ ಪದವಿ ಮಾತ್ರ ಹೊಂದಿದ್ದವರಿಗೆ 11500 ರೂ. ವೇತನ ಲಭ್ಯವಾಗುತ್ತಿತ್ತು. ಹತ್ತು, ಹದಿನೈದು ವರ್ಷಗಳಿಂದ ಅತಿಥಿ ಉಪನ್ಯಾಸಕರಾಗಿಯೇ ಕೆಲಸ ಮಾಡುತ್ತಿರುವ ಮಂದಿಯೂ ಇದೇ ವೇತನ ಪಡೆಯುತ್ತಿರುವುದು ವಿರೋಧಕ್ಕೆ ಕಾರಣವಾಗಿತ್ತು. ಹೀಗಾಗಿ ಇಷ್ಟು ಕಡಿಮೆ ವೇತನದಲ್ಲಿ ಕೆಲಸ ಮಾಡಲು ಸಾಧ್ಯವಿಲ್ಲ ಎಂದು ರಾಜ್ಯದಾದ್ಯಂತ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಅತಿಥಿ ಉಪನ್ಯಾಸಕರು ತರಗತಿಗೆ ಹಾಜರಾಗದೆ ಪ್ರತಿಭಟನೆ ನಡೆಸುತ್ತಿದ್ದರು. ರಾಜ್ಯದಲ್ಲಿ ಅಂದಾಜು 14,500 ಮಂದಿ ಅತಿಥಿ ಉಪನ್ಯಾಸಕರಿದ್ದಾರೆ. ಬೆಳಗಾವಿ ಅಧಿವೇಶನ ನಡೆಯುತ್ತಿರುವಾಗ ಆರಂಭಗೊಂಡಿದ್ದ ಪ್ರತಿಭಟನೆ ಮುಂದುವರಿದಿತ್ತು.
ರಾಜ್ಯ ಸರಕಾರ ಈಗ ಹೊರಡಿಸಿರುವ ಆದೇಶದಂತೆ, ಕರ್ತವ್ಯದ ಅವಧಿಯನ್ನು ಹೆಚ್ಚಿಸಿದರೆ ಈ ಪೈಕಿ ಅರ್ಧದಷ್ಟು ಮಂದಿ ಕೆಲಸ ಕಳಕೊಳ್ಳಲಿದ್ದಾರೆ. ಈಗಾಗ್ಲೇ ನಿರುದ್ಯೋಗದ ಕಾರಣ ಕಡಿಮೆ ಸಂಬಳವಾದರೂ ಆದೀತು ಎಂದು ಕರ್ತವ್ಯ ಮಾಡಿಕೊಂಡು ಬಂದವರು ಈಗ ಉದ್ಯೋಗ ಕಳಕೊಳ್ಳುವ ಆತಂಕದಲ್ಲಿದ್ದಾರೆ. ಡಬಲ್ ವೇತನ ನೀಡಿದ್ದೇವೆಂದು ಕೊಚ್ಚಿಕೊಳ್ಳುವ ಬದಲು ಕೆಲಸ ಕಳೆದುಕೊಳ್ಳುವ ಮಂದಿಯ ಹೊಟ್ಟೆಗೆ ಹೊಡೆಯುವ ಕೆಲಸ ಮಾಡಿದ್ದೀರಿ ಎಂದು ರಾಜ್ಯ ಸಿಎಂ ಬಸವರಾಜ ಬೊಮ್ಮಾಯಿ ವಿರುದ್ಧ ಉಪನ್ಯಾಸಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಹೀಗಾಗಿ ನಮ್ಮ ಪ್ರತಿಭಟನೆ ನಿಲ್ಲೋದಿಲ್ಲ. ನೀವು ಕೆಲಸದಿಂದ ತೆಗೆದು ಹಾಕುವ ಬದಲು ಈಗ ಇರುವ ನೆಲೆಯಲ್ಲೇ ವೇತನ ಹೆಚ್ಚಿಸುವಂತೆ ಬೇಡಿಕೆ ಮುಂದಿಟ್ಟಿದ್ದಾರೆ.
 
ಕರ್ನಾಟಕದ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಅತಿಥಿ ಉಪನ್ಯಾಸಕರ ಬಹುದಿನಗಳ ಬೇಡಿಕೆ ಈಡೇರಿಸಲು ಸರ್ಕಾರ ಒಪ್ಪಿದೆ. ಈ ಸಂಬಂಧ ರಚಿಸಲಾಗಿದ್ದ ಸಮಿತಿಯು ಮಾಡಿದ್ದ ಶಿಫಾರಸುಗಳ ಜಾರಿಗೆ ಹಣಕಾಸಿನ ಅನುಮೋದನೆ ನೀಡಲಾಗಿದೆ. ಇದರೊಂದಿಗೆ ಅತಿಥಿ ಉಪನ್ಯಾಸಕರಿಗೆ ಅನುಕೂಲ ಆಗಲಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ