ಬೆಂಗಳೂರು: ಮಹಿಳೆಯ ಅಪಹರಣ ಪ್ರಕರಣದಲ್ಲಿ ಜೈಲು ಪಾಲಾಗಿರುವ ಸಹೋದರ ಎಚ್ ಡಿ ರೇವಣ್ಣ ಪರವಾಗಿ ಮಾತನಾಡಿರುವ ಎಚ್ ಡಿ ಕುಮಾರಸ್ವಾಮಿ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ವಿರುದ್ಧ ವ್ಯಂಗ್ಯ ಮಾಡಿದ್ದಾರೆ.
ಎಚ್ ಡಿ ರೇವಣ್ಣ ಮತ್ತು ಪ್ರಜ್ವಲ್ ರೇವಣ್ಣ ವಿಡಿಯೋ ಕೇಸ್ ನ್ನು ಎಚ್ ಡಿ ಕುಮಾರಸ್ವಾಮಿಯೇ ಹುಟ್ಟುಹಾಕಿದ್ದಾರೆ. ಅವರೇ ಈ ಕೇಸ್ ನ ಸೂತ್ರಧಾರಿ ಎಂದು ಡಿಕೆ ಶಿವಕುಮಾರ್ ಆರೋಪ ಮಾಡಿದ್ದರು. ಅವರ ಆರೋಪಗಳಿಗೆ ಇಂದು ಕುಮಾರಸ್ವಾಮಿ ತಿರುಗೇಟು ನೀಡಿದ್ದಾರೆ.
ಡಿಕೆಶಿ ಆರೋಪಗಳ ಬಗ್ಗೆ ಮಾಧ್ಯಮಗಳು ಪ್ರಶ್ನಿಸಿದಾಗ ಪ್ರತಿಕ್ರಿಯಿಸಿದ ಕುಮಾರಸ್ವಾಮಿ ಹೌದಪ್ಪಾ ನಾನೇ ಪ್ರಜ್ವಲ್ ಪ್ರಕರಣದ ಡೈರೆಕ್ಟರ್, ಪ್ರೊಡ್ಯೂಸರ್, ಕಥಾನಾಯಕ ಎಲ್ಲಾ. ಅದೇನೋ ಮಲಯಾಳಂನಲ್ಲಿ ಬಂದಿತ್ತಲ್ಲಾ ದೃಶ್ಯಂ ಸಿನಿಮಾ ನಂತರ ಕನ್ನಡಕ್ಕೆ ಮಾಡಿದ್ರು, ಅದರಲ್ಲಿರುವಂತೆ ನಾನೇ ಎಲ್ಲಾ ದೃಶ್ಯದ ಸೂತ್ರಧಾರ ಎಂದು ವ್ಯಂಗ್ಯ ಮಾಡಿದ್ದಾರೆ.
ಇನ್ನು, ಎಚ್ ಡಿ ರೇವಣ್ಣ ಪ್ರಕರಣದಲ್ಲಿ ಅಪಹರಣಕ್ಕೀಡಾದ ಸಂತ್ರಸ್ತ ಮಹಿಳೆಯನ್ನು ಇದುವರೆಗೆ ಯಾಕೆ ಕೋರ್ಟ್ ಗೆ ಹಾಜರುಪಡಿಸಿಲ್ಲ ಎಂದು ಕುಮಾರಸ್ವಾಮಿ ಪ್ರಶ್ನೆ ಮಾಡಿದ್ದಾರೆ. ಮಹಿಳೆಯನ್ನು ಟ್ರೇಸ್ ಮಾಡಿ 5 ದಿನ ಕಳೆದರೂ ಇನ್ನೂ ಯಾಕೆ ನ್ಯಾಯಾಲಯದ ಮುಂದೆ ಹಾಜರುಪಡಿಸಿಲ್ಲ, ಆಕೆಯ ಹೇಳಿಕೆಯನ್ನೂ ದಾಖಲಿಸಿಕೊಂಡಿಲ್ಲ. ಇಷ್ಟು ತಡಮಾಡುತ್ತಿರುವುದು ಯಾಕೆ? ಇದರ ಅರ್ಥ ರೇವಣ್ಣರನ್ನು ಉದ್ದೇಶಪೂರ್ವಕವಾಗಿ ಜೈಲಿನಲ್ಲಿ ಕೂಡಿಹಾಕುವ ಸರ್ಕಾರದ ತಂತ್ರ ಇದಾಗಿದೆ ಎಂದು ಆರೋಪಿಸಿದ್ದಾರೆ.