ಹೆರವನಾಡು ಧವಸ ಭಂಡಾರ ಸಹಕಾರ ಸಂಘಕ್ಕೆ ಅಗತ್ಯ ನೆರವು: ಕೆ.ಜಿ.ಬೋಪಯ್ಯ

ಸೋಮವಾರ, 28 ಮಾರ್ಚ್ 2022 (18:59 IST)
ಹೆರವನಾಡು ಧವಸ ಭಂಡಾರ ಸಹಕಾರ ಸಂಘವು ಶತಮಾನೋತ್ಸವ ಪೂರ್ಣಗೊಳ್ಳುತ್ತಿರುವ ಹಿನ್ನೆಲೆ ಧವಸ ಭಂಡಾರ ಸಹಕಾರ ಭವನ ನಿರ್ಮಾಣಕ್ಕೆ ಅಗತ್ಯ ನೆರವು ನೀಡಲಾಗುವುದು ಎಂದು ರಾಜ್ಯ ಸರ್ಕಾರಿ ಜಮೀನುಗಳ ಸಂರಕ್ಷಣೆ ಸಮಿತಿ ಅಧ್ಯಕ್ಷರು ಹಾಗೂ ಶಾಸಕರಾದ ಕೆ.ಜಿ.ಬೋಪಯ್ಯ ಅವರು ತಿಳಿಸಿದ್ದಾರೆ.  
ತಾಲ್ಲೂಕಿನ ಹೆರವನಾಡು ಗ್ರಾಮದಲ್ಲಿನ ಹೆರವನಾಡು ಧವಸ ಭಂಡಾರ ಶತಮಾನೋತ್ಸವ ಕಾರ್ಯಕ್ರಮ, ನ್ಯಾಯಬೆಲೆ ಅಂಗಡಿ ಆರಂಭ ಹಾಗೂ ಜಲಜೀವನ್ ಮಿಷನ್ ಯೋಜನೆ ಅನುಷ್ಠಾನಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.  
ಧವಸ ಭಂಡಾರ ಸಹಕಾರ ಭವನ ನಿರ್ಮಾಣ ಸಂಬಂಧ ಜಾಗವನ್ನು ಆರ್ಟಿಸಿ ಮಾಡಿಸಿಕೊಳ್ಳುವಂತಾಗಬೇಕು. ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ಹಾಗೂ ಶಾಸಕರ ಅನುದಾನದಿಂದ ಅಗತ್ಯ ನೆರವು ನೀಡಲಾಗುವುದು ಎಂದು ಶಾಸಕರು ನುಡಿದರು.  
ಕೊಡಗು ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ಇಡೀ ರಾಜ್ಯದಲ್ಲಿಯೇ 3 ನೇ ಸ್ಥಾನ ಪಡೆದು ಸಹಕಾರ ಕ್ಷೇತ್ರದಲ್ಲಿ ಮಹತ್ತರ ಮೈಲುಗಲ್ಲು ಸಾಧಿಸಿದೆ. ಆ ನಿಟ್ಟಿನಲ್ಲಿ ಪ್ರಥಮ ಸ್ಥಾನ ಪಡೆಯಲು ಪ್ರಯತ್ನಿಸಬೇಕು ಎಂದು ಶಾಸಕರು ಹೇಳಿದರು.  
ಜಿಲ್ಲೆಯ ಹಿರಿಯರು ಕಟ್ಟಿ ಬೆಳೆಸಿದ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕನ್ನು ಸಹಕಾರ ತತ್ವದಡಿ ಮುಂದುವರೆಸಿಕೊಂಡು ಹೋಗುತ್ತಿರುವುದು ಶ್ಲಾಘನೀಯ ಎಂದು ಕೆ.ಜಿ.ಬೋಪಯ್ಯ ಅವರು ಮೆಚ್ಚುಗೆ ವ್ಯಕ್ತಪಡಿಸಿದರು.  
‘ಜಿಲ್ಲೆಯಲ್ಲಿ ವ್ಯವಸಾಯ ಸೇವಾ ಸಹಕಾರ ಸಂಘಗಳು ಉತ್ತಮವಾಗಿ ಕಾರ್ಯ ನಿರ್ವಹಿಸುತ್ತಿವೆ. ಅದೇ ರೀತಿ ಧವಸ ಭಂಡಾರ ಸಹಕಾರ ಸಂಘಗಳು ಕಡಿಮೆ ಆಗುತ್ತಿದ್ದರೂ ಸಹ, ಅಲ್ಲಲ್ಲಿ ಕೃಷಿಕರು ಮೆಚ್ಚುವ ರೀತಿಯಲ್ಲಿ ಕಾರ್ಯ ನಿರ್ವಹಿಸುತ್ತಿವೆ. ಆ ನಿಟ್ಟಿನಲ್ಲಿ ಧವಸ ಭಂಡಾರ ಸಹಕಾರ ಸಂಘಗಳನ್ನು ಪುನಶ್ಚೇತನ ಮಾಡಬೇಕಿದೆ ಎಂದು ಕೆ.ಜಿ.ಬೋಪಯ್ಯ ಅವರು ನುಡಿದರು.’ 
ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಪ್ರತಿ ಕುಟುಂಬಕ್ಕೂ ನಲ್ಲಿ ನೀರು ಸಂಪರ್ಕ ಕಲ್ಪಿಸಬೇಕು ಎಂಬ ಉದ್ದೇಶದಿಂದ ಜಲ ಜೀವನ್ ಮಿಷನ್ ಯೋಜನೆ ಜಾರಿಗೊಳಿಸಿದ್ದು, ಆ ದಿಸೆಯಲ್ಲಿ ಈ ಭಾಗದ 443 ಮನೆಗಳಿಗೆ ನಲ್ಲಿ ನೀರು ಸಂಪರ್ಕ ದೊರೆಯಲಿದ್ದು, ಬೆಟ್ಟಗೇರಿ ಗ್ರಾ.ಪಂ.ವ್ಯಾಪ್ತಿಗೆ ಸುಮಾರು 3.15 ಕೋಟಿ ರೂ ಅನುದಾನ ದೊರೆಯಲಿದೆ ಎಂದರು. 
ಡಿಸಿಸಿ ಬ್ಯಾಂಕ್ನಿಂದ ಸಾಲ ಸೌಲಭ್ಯ ಪಡೆಯುವಂತಾಗಲು ಫ್ರೂಟ್ಸ್ ತಂತ್ರಾಂಶದಲ್ಲಿ ಹೆಸರು ನೋಂದಣಿ ಮಾಡಿಕೊಳ್ಳಬೇಕು ಎಂದು ಶಾಸಕರು ಸಲಹೆ ಮಾಡಿದರು.
ಕಳೆದ ಎರಡು-ಮೂರು ವರ್ಷದಿಂದ ಪ್ರಾಕೃತಿಕ ವಿಕೋಪ ಹಾಗೂ ಕೋವಿಡ್ 19 ನಿಂದ ಅಭಿವೃದ್ಧಿ ಕೆಲಸಗಳು ಕಡಿಮೆ ಆಗಿದ್ದವು, ಸದ್ಯ ಕೋವಿಡ್ ಪ್ರಕರಣಗಳು ಕಡಿಮೆ ಆಗಿದ್ದು, ಅಭಿವೃದ್ದಿಗೆ ವೇಗ ದೊರೆಯಲಿದೆ ಎಂದು ಶಾಸಕರು ತಿಳಿಸಿದರು. 
ಈ ಹಿಂದೆ ಗ್ರಾಮ ವಿಕಾಸ ಯೋಜನೆಯಡಿ ಹೆರವನಾಡು ಗ್ರಾಮ ಅಭಿವೃದ್ಧಿಗೆ 1 ಕೋಟಿ ರೂ ಬಿಡುಗಡೆ ಆಗಿತ್ತು, ಆ ದಿಸೆಯಲ್ಲಿ ಹೆರವನಾಡು ಸೇರಿದಂತೆ ಹಲವು ಗ್ರಾಮಗಳ ಅಭಿವೃದ್ಧಿಗೆ ಮತ್ತಷ್ಟು ಶ್ರಮಿಸಲಾಗುವುದು ಎಂದು ಕೆ.ಜಿ.ಬೋಪಯ್ಯ ಅವರು ಹೇಳಿದರು. 
ಇಲ್ಲಿನ ರಸ್ತೆ ಅಭಿವೃದ್ಧಿಗೆ ವಿಶೇಷ ಅನುದಾನ ನೀಡಲಾಗುವುದು, ಹಾಗೆಯೇ ಕಾಟಕೇರಿಯಿಂದ ಚೇರಂಗಾಲದ ವರೆಗೆ ರಸ್ತೆ ಅಗಲೀಕರಣ ಆಗಲಿದ್ದು, ರಸ್ತೆ ಅಭಿವೃದ್ಧಿಗೆ ಕೈಜೋಡಿಸುವಂತೆ ಶಾಸಕರು ಮನವಿ ಮಾಡಿದರು. 
ಕೃಷಿಕರ ಮನೆ ಬಾಗಿಲಿಗೆ ಕಂದಾಯ ದಾಖಲೆಗಳನ್ನು ತಲುಪಿಸುವಲ್ಲಿ ಸರ್ಕಾರ ಶ್ರಮಿಸಿದೆ. ಆ  ನಿಟಿನ್ಟಲ್ಲಿ ಸರ್ಕಾರದ ಸೌಲಭ್ಯ ಪಡೆದುಕೊಳ್ಳಲು ಮುಂದಾಬೇಕು. ಸಹಕಾರ ಸಂಘದ ಮೂಲಕ 70 ಕೋಟಿ ರೂ ಹೆಚ್ಚಿನ ಸಾಲಸೌಲಭ್ಯ ಸರ್ಕಾರದಿಂದ ದೊರೆತಿದೆ ಎಂದು ರಾಜ್ಯ ಸರ್ಕಾರಿ ಜಮೀನುಗಳ ಸಂರಕ್ಷಣೆ ಸಮಿತಿ ಅಧ್ಯಕ್ಷರು ತಿಳಿಸಿದರು.  
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದ ಸರ್ಕಾರ ಬಜೆಟ್ನಲ್ಲಿ ಕೊಡಗು ಜಿಲ್ಲೆಗೆ ಹಲವು ಕಾರ್ಯಕ್ರಮ ಪ್ರಕಟಿಸಿದೆ. ಆ ನಿಟ್ಟಿನಲ್ಲಿ ಕೊಡವ ಜನಾಂಗದ ಅಭಿವೃದ್ಧಿಗೆ 10 ಕೋಟಿ ರೂ ಪ್ರಕಟಿಸಿದೆ, ಹಾಗೆಯೇ ಮಂಗಳೂರು ವಿವಿಯಲ್ಲಿ ಅರೆಭಾಷೆ ಸಂಶೋಧನಾ ಕೇಂದ್ರ ಸ್ಥಾಪನೆಗೆ ಅವಕಾಶ ಮಾಡಿದೆ ಎಂದರು. 
 ಕೊಡಗು ಜಿಲ್ಲಾ ಸಹಕಾರ ಬ್ಯಾಂಕ್ನ ಅಧ್ಯಕ್ಷರಾದ ಕೊಡಂದೇರ ಬಾಂಡ್ ಗಣಪತಿ ಅವರು ಮಾತನಾಡಿ ಜಿಲ್ಲೆಯಲ್ಲಿ 8 ಸಹಕಾರ ಧವಸ ಭಂಡಾರಗಳು ಶತಮಾನೋತ್ಸವ ಆಚರಿಸಿಕೊಳ್ಳುತ್ತಿವೆ. 106 ಧವಸ ಭಂಡಾರ ಸಹಕಾರ ಸಂಘದಲ್ಲಿ ಹಲವು ಧವಸ ಭಂಡಾರ ಸಹಕಾರ ಸಂಘಗಳು ಕ್ರೀಯಾಶೀಲವಾಗಿ ಕಾರ್ಯನಿರ್ವಹಿಸುತ್ತಿವೆ ಎಂದರು.   
ಸಹಕಾರ ಸಂಘಕ್ಕೆ 115 ವರ್ಷಗಳ ಇತಿಹಾಸವಿದೆ. ಆ ದಿಸೆಯಲ್ಲಿ ಕೊಡಗು ಜಿಲ್ಲೆಯ ಎಲ್ಲಾ ಕೃಷಿಕರಿಗೂ ಸಹಕಾರ ಸಂಘದ ಸೌಲಭ್ಯಗಳು ತಲುಪುವಂತಾಗಲು ಶ್ರಮಿಸಲಾಗುತ್ತಿದೆ ಎಂದು ಬಾಂಡ್ ಗಣಪತಿ ಅವರು ಹೇಳಿದರು. 
ಕೊಡಗು ಜಿಲ್ಲೆಯ ಸಹಕಾರ ಸಂಘಗಳು ಉತ್ತಮವಾಗಿ ಕಾರ್ಯ ನಿರ್ವಹಿಸುತ್ತಿವೆ ಎಂದು ಸಹಕಾರ ಸಚಿವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ ಎಂದು ಇದೇ ಸಂದರ್ಭದಲ್ಲಿ ಡಿಸಿಸಿ ಬ್ಯಾಂಕ್ ಅಧ್ಯಕ್ಷರು ತಿಳಿಸಿದರು. 
ಹೆರವನಾಡು ಧವಸ ಭಂಡಾರ ಸಹಕಾರ ಸಂಘದ ಅಭಿವೃದ್ಧಿಗೆ 50 ಸಾವಿರ ರೂ ನೀಡಲಾಗುವುದು ಎಂದು ಬಾಂಡ್ ಗಣಪತಿ ಅವರು ಇದೇ ಸಂದರ್ಭದಲ್ಲಿ ಪ್ರಕಟಿಸಿದರು. 
ಕರ್ನಾಟಕ ರಾಜ್ಯ ಪಶ್ಚಿಮ ಘಟ್ಟ ಸಂರಕ್ಷಣಾ ಕಾರ್ಯಪಡೆ ಅಧ್ಯಕ್ಷರಾದ ಶಾಂತೆಯಂಡ ರವಿಕುಶಾಲಪ್ಪ ಅವರು ಮಾತನಾಡಿ ಸಹಕಾರ ಸಂಘದ ಸೌಲಭ್ಯಗಳು ಕಾಡಿನಲ್ಲಿ ವಾಸಿಸುವ ಆದಿವಾಸಿಗಳಿಗೂ ತಲುಪುವಂತಾಗಬೇಕು ಎಂದು ಸಲಹೆ ಮಾಡಿದರು. 
ಸರ್ಕಾರ ಪ್ರತಿ ಕುಟುಂಬಕ್ಕೂ ನಲ್ಲಿ ನೀರು ಒದಗಿಸುವಲ್ಲಿ ಜಲಜೀವನ್ ಮಿಷನ್ ಅಭಿಯಾನ ಜಾರಿಗೊಳಿಸಿದೆ. ಹಾಗೆಯೇ ಪ್ರತಿ ಕುಟುಂಬಕ್ಕೂ ಬೆಳಕು ಯೋಜನೆಯಡಿ ವಿದ್ಯುತ್ ಸಂಪರ್ಕ ಕಲ್ಪಿಸಲಾಗುತ್ತಿದೆ. ರಸ್ತೆ ಸುಧಾರಣೆಗೆ ಒತ್ತು ನೀಡಲಾಗಿದೆ. ಹೀಗೆ ಹಲವು ಅಭಿವೃದ್ಧಿ ಕಾರ್ಯಕ್ರಮಗಳನ್ನು ಸರ್ಕಾರ ಕೈಗೊಂಡಿದೆ ಎಂದು ರವಿಕುಶಾಲಪ್ಪ ಅವರು ತಿಳಿಸಿದರು.
ಸರ್ಕಾರ ರೈತರ ಕೃಷಿ ಪಂಪ್ಸೆಟ್ಗಳಿಗೆ 10 ಎಚ್ಪಿ ವರೆಗೂ ಉಚಿತ ವಿದ್ಯುತ್ ಒದಗಿಸಲು ವಿಧಾನಸಭಾ ಅಧಿವೇಶನದಲ್ಲಿ ಮುಖ್ಯಮಂತ್ರಿ ಅವರು ಪ್ರಕಟಿಸಿದ್ದಾರೆ. ಹೀಗೆ ಹಲವು ಅಭಿವೃದ್ಧಿ ಕಾರ್ಯಗಳು ನಡೆದಿವೆ ಎಂದು ರವಿಕುಶಾಲಪ್ಪ ಅವರು ಹೇಳಿದರು.  
ಪಶ್ಚಿಮ ಘಟ್ಟ ಸಂರಕ್ಷಣಾ ಕಾರ್ಯಪಡೆ ಅಧ್ಯಕ್ಷರಾದ ಶಾಂತೆಯಂಡ ರವಿಕುಶಾಲಪ್ಪ, ಸಹಕಾರ ರತ್ನ ಪ್ರಶಸ್ತಿ ಪಡೆದಿರುವ ಬಾಂಡ್ ಗಣಪತಿ ಮತ್ತು ಕೊಡಗು ಜಿಲ್ಲಾ ಸಹಕಾರ ಬ್ಯಾಂಕ್ನ ಉಪಾಧ್ಯಕ್ಷರಾದ ಕೇಟೋಳಿರ ಹರೀಶ್ ಪೂವಯ್ಯ ಅವರನ್ನು ಇದೇ ಸಂದರ್ಭದಲ್ಲಿ ಸನ್ಮಾನಿಸಲಾಯಿತು. 
ಬೆಟ್ಟಗೇರಿ ಗ್ರಾ.ಪಂ.ಅಧ್ಯಕ್ಷರಾದ ನಾಪಂಡ ರ್ಯಾಲಿ ಮಾದಯ್ಯ, ಆರ್ಎಂಸಿ ಮಾಜಿ ಅದ್ಯಕ್ಷರಾದ ಅರಂಬೂರು ವಸಂತ್ ಕುಮಾರ್, ಡಿಸಿಸಿ ಬ್ಯಾಂಕ್ ನಿರ್ದೇಶಕರಾದ ಹೊಸೂರು ಸತೀಶ್ ಕುಮಾರ್, ಕಿಮ್ಮುಡಿರ ಜಗದೀಶ್, ಡಿಸಿಸಿ ಬ್ಯಾಂಕ್ ಧವಸ ಭಂಡಾರ ಪ್ರತಿನಿಧಿ ಕೋಲತಂಡ ಎ.ಸುಬ್ರಮಣಿ, ಮರಗೋಡು ವಿಎಸ್ಎಸ್ಎನ್ ಬ್ಯಾಂಕ್ ಅಧ್ಯಕ್ಷರಾದ ಕಾಂಗೀರ ಸತೀಶ್, ಹೆರವನಾಡು ಧವಸ ಭಂಡಾರದ ಆಡಳಿತ ಮಂಡಳಿ ಅಧ್ಯಕ್ಷರಾದ ಬೆಪ್ಪುರನ ಮೇದಪ್ಪ ಇತರರು ಇದ್ದರು. ರಾಜ ಕಾರ್ಯಪ್ಪ ಸ್ವಾಗತಿಸಿದರು, ಪುಷ್ಪ ಪ್ರಾರ್ಥಿಸಿದರು, ಬೆಪ್ಪುರನ ಮೇದಪ್ಪ ನಿರೂಪಿಸಿ ವಂದಿಸಿದರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ