ಬೆಂಗಳೂರು: ಕರ್ನಾಟಕ ಸರ್ಕಾರದ ಗ್ಯಾರಂಟಿ ಯೋಜನೆಗಳನ್ನು ಉಳ್ಳವರು ಸ್ವ ಇಚ್ಛೆಯಿಂದ ಬಿಟ್ಟುಕೊಡಲಿ ಎಂದು ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಎಚ್.ಎಂ ರೇವಣ್ಣಗೆ ನೆಟ್ಟಿಗರು ನೀವು ಸರ್ಕಾರೀ ಸವಲತ್ತುಗಳನ್ನು ಬಿಡ್ತೀರಾ ಎಂದು ಪ್ರಶ್ನೆ ಮಾಡಿದ್ದಾರೆ.
ಗ್ಯಾರಂಟಿ ಯೋಜನೆಗಳು ಇತ್ತೀಚೆಗೆ ಸರ್ಕಾರಕ್ಕೆ ಹೊರೆಯಾಗಿ ಪರಿಣಮಿಸುತ್ತಿದೆ ಎನ್ನುವುದು ಗುಟ್ಟಾಗಿ ಉಳಿದಿಲ್ಲ. ಹಾಗಿದ್ದರೂ ಕೊಟ್ಟ ಮಾತಿನಂತೇ ಗ್ಯಾರಂಟಿ ಯೋಜನೆಗಳನ್ನು ಮುಂದುವರಿಸಿಕೊಂಡೇ ಹೋಗಬೇಕಾದ ಅನಿವಾರ್ಯತೆ ಸರ್ಕಾರದ್ದಾಗಿದೆ.
ಈ ನಡುವೆ ಕೆಲವು ಶ್ರೀಮಂತರೂ ಉಚಿತ ಬಸ್ ಪ್ರಯಾಣ, ಗೃಹಲಕ್ಷ್ಮಿ ಯೋಜನೆ ಲಾಭ ಪಡೆದುಕೊಳ್ಳುತ್ತಿರುವುದರ ಬಗ್ಗೆ ಎಚ್.ಎಂ. ರೇವಣ್ಣ ಆಕ್ಷೇಪ ವ್ಯಕ್ತಪಡಿಸಿದ್ದು, ಉಳ್ಳವರು ಗ್ಯಾರಂಟಿಯನ್ನು ತಾವಾಗಿಯೇ ಬಿಟ್ಟುಕೊಡಲಿ ಎಂದಿದ್ದಾರೆ.
ಇದಕ್ಕೆ ಈಗ ಸೋಷಿಯಲ್ ಮೀಡಿಯಾದಲ್ಲಿ ಕೆಲವರು ಹಾಗಿದ್ದರೆ ನೀವೂ ಸರ್ಕಾರ ನೀಡುವ ಕಾರು, ಬಂಗಲೆ, ಆಳು-ಕಾಳು ಸವಲತ್ತುಗಳನ್ನು ಬಿಟ್ಟುಕೊಡ್ತೀರಾ? ಮೊದಲು ನೀವು ಬಿಟ್ಟುಕೊಡಿ. ಆಗ ಜನರೂ ಬಿಟ್ಟುಕೊಡುತ್ತಾರೆ ಎಂದು ತಿರುಗೇಟು ನೀಡಿದ್ದಾರೆ.