ಮಂಗಳೂರು: ಸಂಸತ್‌ನಲ್ಲಿ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿಯ ಎರಡು ಕೆನ್ನೆಗೆ ಭಾರಿಸಿದರೆ ಎಲ್ಲವೂ ಸರಿಹೋಗುತ್ತದೆ ಎಂದು ಹೇಳಿದ್ದ ಶಾಸಕ ಭರತ್ ಶೆಟ್ಟಿ ಹೇಳಿಕೆಗೆ ಕೈ ನಾಯಕರು ಆಕ್ರೋಶ ಹೊರಹಾಕುತ್ತಿದ್ದಾರೆ.
ಲೋಕಸಭೆಯಲ್ಲಿ ವಿಪಕ್ಷ ನಾಯಕ ರಾಹುಲ್ ಗಾಂಧಿ ಅವರು ಹಿಂದೂ ವಿರೋಧಿ ಹೇಳಿಕೆ ನೀಡಿದ್ದರೆಂದು ಬಿಜೆಪಿ ಯುವಮೋರ್ಚಾ ಪ್ರತಿಭಟನೆ ನಡೆಸಿತು. ಈ ವೇಳೆ ಪ್ರತಿಭಟನಕಾರರನ್ನು ಉದ್ದೇಶಿಸಿ ಮಾತನಾಡಿದ ಭರತ್ ಶೆಟ್ಟಿ ಅವರು ರಾಹುಲ್ ಗಾಂಧಿ ಅವರಿಗೆ ಸಂಸತ್‌ನಲ್ಲಿ ಎರಡು ಕೆನ್ನೆಗೆ ಭಾರಿಸಬೇಕು. ಆಗ ಎಲ್ಲವೂ ಸರಿಹೋಗುತ್ತದೆ ಎಂದಿದ್ದರು.
ಭರತ್ ಶೆಟ್ಟಿ ಈ ಹೇಳಿಕೆ ಬಗ್ಗೆ ಕಾಂಗ್ರೆಸ್‌ನ ಹಿರಿಯ ನಾಯಕ ರಮಾನಾಥ್ ರೈ ಅವರು ಕಿಡಿಕಾರಿದ್ದಾರೆ. ಬಿಜೆಪಿಯ ಶಾಸಕರು ರಾಹುಲ್ ಗಾಂಧಿ ಮಾತನಾಡಿರೋದನ್ನು ಅಪಾರ್ಥ ಮಾಡಿಕೊಂಡಿದ್ದಾರೆ. ಭರತ್ ಶೆಟ್ಟಿ ಶಾಸಕನಾಗಲು ನಾಲಾಯಕ್ ವ್ಯಕ್ತಿಯಾಗಿದ್ದು, ಅವನಿಗೆ ಯಾವುದೇ ಯೋಗ್ಯತೆಯಿಲ್ಲ. ಭರತ್ ಶೆಟ್ಟಿ ಗಂಡು ಮಗ ಆಗಿದ್ದರೆ ಮೊದಲು ಸಾಮಾನ್ಯ ಕಾರ್ಯಕರ್ತನ ಮೇಲೆ ಕೈ ಮಾಡಿ ನೋಡಲಿ. ಆಮೇಲೆ ನಾವು ನೋಡಿಕೊಳ್ಳುತ್ತೇವೆ.
ಬೆಳ್ತಂಗಡಿಯ ಬಿಜೆಪಿ ಶಾಸಕನೊಬ್ಬ ಪೊಲೀಸ್ ಅಧಿಕಾರಿಗಳ ಮೇಲೆ ಕೈ ಮಾಡಲು ಹೋದರೆ, ಮತ್ತೊಬ್ಬವಿರೋಧ ಪಕ್ಷದ ನಾಯಕನಿಗೆ ಕೆನ್ನೆಗೆ ಭಾರಿಸಬೇಕೆಂಬ ಬೇಜಾವಾಬ್ದಾರಿ ಹೇಳಿಕೆ ನೀಡುತ್ತಾನೆ. ಇಂತವರ ಮೇಲೆ ಸುಮೋಟೋ ಕೇಸ್ ದಾಖಲು ಮಾಡಬೇಕು ಎಂದು ಆಕ್ರೋಶ ಹೊರಹಾಕಿದರು.