ಮಾಜಿ ಮುಖ್ಯಮಂತ್ರಿಗಳಾದ ಎಸ್.ಎಂ.ಕೃಷ್ಣ, ಧರ್ಮಸಿಂಗ್ ಹಾಗೂ ಎಚ್.ಡಿ.ಕುಮಾರಸ್ವಾಮಿ ವಿರುದ್ಧದ ಅಕ್ರಮ ಗಣಿಗಾರಿಕೆ ಪ್ರಕರಣ ಕುರಿತು ಲೋಕಾಯುಕ್ತದಲ್ಲಿ ದಾಖಲಾದ ಪ್ರಕರಣವನ್ನು ಹಿಂಪಡೆಯುವಂತೆ ಸಲ್ಲಿಕೆಯಾಗಿದ್ದ ಅರ್ಜಿಯ ವಿಚಾರಣೆ ಇಂದು ಸುಪ್ರೀಂಕೋರ್ಟ್‌ನಲ್ಲಿ ನಡೆಯಿತು.
ಮೂರು ಪ್ರಕರಣಗಳನ್ನು ವಿಚಾರಣೆ ನಡೆಸಿದ ಸುಪ್ರೀಕೋರ್ಟ್ ಮೂವರು ಮಾಜಿ ಮುಖ್ಯಮಂತ್ರಿ ಹಾಗೂ ಐಎಎಸ್ ಅಧಿಕಾರಿಗಳಾದ ಡಿ.ಎಸ್.ಅಶ್ವತ್, ಕೆ.ಶ್ರೀನಿವಾಸ್ ಮೇಲಿದ್ದ ಆರೋಪಗಳ ವಿಚಾರಣೆ ಕುರಿತು ನಾಲ್ವರ ವಿರುದ್ಧ ತನಿಖೆಗೆ ಇದ್ದ ತಡೆಯಾಜ್ಞೆಯನ್ನು ಮುಂದುವರೆಸಿ ಆದೇಶ ಹೊರಡಿಸಿದೆ.
ಮಾಜಿ ಸಿಎಂ ಧರ್ಮಸಿಂಗ್, ಅಧಿಕಾರಿಗಳಾದ ಬಸಪ್ಪ ರೆಡ್ಡಿ, ಗಂಗಾರಾಮ್ ಬಡೇರಿಯಾ, ವಿ.ಉಮೇಶ್, ಪೆರುಮಾಳ್, ಜೀಜಾ ಹರಿಸಿಂಗ್, ಎಂ.ರಾಮಪ್ಪ, ಮಹೇಂದ್ರ ಜೈನ್ ಹಾಗೂ ಶಂಕರಲಿಂಗಯ್ಯ ವಿರುದ್ಧದ ಅಕ್ರಮ ಗಣಿಗಾರಿಕೆ ದೂರಿನ ತನಿಖೆ ಮುಂದುವರೆಯಲಿದೆ ಎಂದು ಸುಪ್ರೀಂಕೋರ್ಟ್ ತಿಳಿಸಿದೆ.
ಎಸ್.ಎಂ.ಕೃಷ್ಣ ಹಾಗೂ ಎಚ್.ಡಿ.ಕುಮಾರಸ್ವಾಮಿ ತಮ್ಮ ವಿರುದ್ಧದ ಪ್ರಕರಣವನ್ನು ರದ್ದುಪಡಿಸುವಂತೆ ಅರ್ಜಿ ಸಲ್ಲಿಸಿದ್ದರು. ಆದರೆ, ಧರ್ಮಸಿಂಗ್ ಹಾಗೂ ಅಧಿಕಾರಿಗಳು ಅರ್ಜಿ ಸಲ್ಲಿಸಿರಲಿಲ್ಲ. ಹೀಗಾಗಿ ಅರ್ಜಿ ಸಲ್ಲಿಸಿದ ನಾಲ್ವರನ್ನು ಹೊರತುಪಡಿಸಿ ಉಳಿದವರ ವಿರುದ್ಧ ತನಿಖೆ ನಡೆಯಲಿದೆ.