ಬೆಂಗಳೂರು: ಮಾಜಿ ಸಚಿವ ಎಚ್.ಡಿ. ರೇವಣ್ಣ ಮತ್ತು ಅವರ ಪುತ್ರ ಪ್ರಜ್ವಲ್ ರೇವಣ್ಣ ಅವರ ವಿರುದ್ಧ ಸಿಐಡಿ ವಿಶೇಷ ತನಿಖಾ ದಳ ಶುಕ್ರವಾರ ನ್ಯಾಯಾಲಯಕ್ಕೆ ದೋಷಾರೋಷಣಾ ಪಟ್ಟಿ ಸಲ್ಲಿಸಿದ ಬೆನ್ನಲ್ಲೇ ಕಾಂಗ್ರೆಸ್ ಟ್ವೀಟ್ ಮೂಲಕ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರಿಗೆ ಪ್ರಶ್ನೆಗಳ ಸವಾಲು ಹಾಕಿದೆ.
ಎಚ್.ಡಿ. ರೇವಣ್ಣ ಅವರು ಮಹಿಳೆಯ ಇಚ್ಚೆಗೆ ವಿರುದ್ಧವಾಗಿ ಕೈಹಿಡಿದು ಎಳೆದು, ಅವರ ಮೈ ಕೈಮುಟ್ಟಿ ಹತ್ತಿರಕ್ಕೆ ಎಳೆದುಕೊಂಡು ಲೈಂಗಿಕ ಕಿರುಕುಳ ನೀಡಿರುವುದು ಸಾಬೀತಾಗಿದೆ ಎಂದು ಆರೋಪ ಪಟ್ಟಿಯಲ್ಲಿ ತಿಳಿಸಲಾಗಿದೆ. ಮಾಜಿ ಸಂಸದ ಪ್ರಜ್ವಲ್ ಅತ್ಯಾಚಾರ ನಡೆಸಿ, ವಿಡಿಯಿ ಚಿತ್ರೀಕರಿಸಿಕೊಂಡಿರುವುದು ತನಿಖೆಯಲ್ಲಿ ದೃಢಪಟ್ಟದೆ ಎಂದೂ ಚಾರ್ಚ್‌ಶೀಟ್‌ನಲ್ಲಿ ಉಲ್ಲೇಖಿಸಲಾಗಿದೆ.
ಕಾಂಗ್ರೆಸ್ ವಿರುದ್ಧ ಸದಾ ಕಿಡಿಕಾರುತ್ತಿರುವ ಕುಮಾರಸ್ವಾಮಿ ಅವರಿಗೆ ಈ ದೋಷಾರೋಷಣಾ ಪಟ್ಟಿಯಲ್ಲಿ ಮುಂದಿಟ್ಟುಕೊಂಡು ಪ್ರಶ್ನೆಗಳನ್ನು ಎಸೆಯಲಾಗಿದೆ.
ಕಾಂಗ್ರೆಸ್ ಟೀಟ್‌ನಲ್ಲಿ ಏನಿದೆ: ಕುಮಾರಸ್ವಾಮಿಯವರೇ, ನಿಮ್ಮ ಕುಟುಂಬ ಸದಸ್ಯರ ಅನಾಚಾರಗಳ ಚಾರ್ಜ್ ಶೀಟ್ ಸಲ್ಲಿಕೆಯಾಗಿದೆ, ಇದಕ್ಕೊಂದು ಪತ್ರಿಕಾಗೋಷ್ಠಿ ನಡೆಸುವುದಿಲ್ಲವೇ?. ಪೊಲೀಸರು ಹಲವು ಆಯಾಮಗಳಲ್ಲಿ ಕೂಲಂಕುಶವಾಗಿ ತನಿಖೆ ನಡೆಸಿ ಕರಾಳ ಕೃತ್ಯವನ್ನು ತೆರೆದಿಟ್ಟಿದ್ದಾರೆ.
ವಿಡಿಯೋ ಬಿಡುಗಡೆ ಮಾಡಿದ್ದೇ ಮಹಾಪರಾಧ ಎಂದು ಒಂದೊಂದು ದಿನಕ್ಕೆ ಒಬ್ಬೊಬ್ಬರ ಮೇಲೆ ಆರೋಪ ಮಾಡುತ್ತಿದ್ದ ನೀವು, ತಮ್ಮ ಅಣ್ಣ, ಅಣ್ಣನ ಮಗನ ಈ ಕುಕೃತ್ಯದ ಬಗ್ಗೆ ಏಕೆ ಪಶ್ಚಾತಾಪ ಪಡುತ್ತಿಲ್ಲ? ತಮ್ಮ ಕುಟುಂಬದ ಈ ಮಹಾಪಾಪಕ್ಕೆ ತಲೆ ತಗ್ಗಿಸುತ್ತಿಲ್ಲ ಏಕೆ? ಎಂದು ಪ್ರಶ್ನೆಗಳನ್ನು ಹಾಕಿದೆ.