ಬೆಂಗಳೂರು: ರಾಜಧಾನಿ ಬೆಂಗಳೂರಿಗೆ ಕಡೆಗೂ ವರುಣನ ಆಗಮನವಾಗಿದೆ. ಬಿಸಿಲ ಬೇಗೆಗೆ ಉರಿಯುತ್ತಿದ್ದ ಉದ್ಯನನಗರಿಯಲ್ಲಿ ಗುರುವಾರ ಮತ್ತು ಶುಕ್ರವಾರ ಮಳೆ ತಂಪೆರೆದಿದೆ.
ಕಳೆದ ಎರಡು ತಿಂಗಳಿನಿಂದ ಬೆಂಗಳೂರು ನಗರದಲ್ಲಿ ಬಿಸಿಲಿನ ತಾಪ ಗರಿಷ್ಠ ಮಟ್ಟಕ್ಕೆ ಏರಿಕೆಯಾಗಿ ಸಿಲಿಕಾನ್ ಸಿಟಿಯ ಜನರು ಬಿಸಿಲ ಧಗೆಗೆ ಹೈರಾಣಗಿದ್ದರು. ಇನ್ನೂ ಬಿಸಿಲಿನ ಝಳಕ್ಕೆ ಜನರು ಮನೆಯಿಂದ ಹೊರಬರಲು ಹಿಂದೇಟು ಹಾಕುತ್ತಿದ್ದರು. ವರುಣನ ಆಗಮನಕ್ಕಾಗಿಯೇ ಎದುರು ನೋಡುತ್ತಿದ್ದ ಬೆಂಗಳೂರು ಜನತೆ ಕೊನೆಗೂ ಸಂತಸಗೊಂಡಿದ್ದಾರೆ.
ಗುರುವಾರ ನಗರದ ಹಲವೆಡೆ ಉತ್ತಮ ಮಳೆಯಾಗಿತ್ತು, ಇನ್ನೂ ಹಲವೆಡೆ ಮಳೆಯಾಗಿರಲಿಲ್ಲ. ಶುಕ್ರವಾರ ಬೆಳಗ್ಗೆಯಿಂದಲೇ ಮೋಡಕವಿದ ವಾತಾವರಣವಿದ್ದು, ಮಧ್ಯಾಹ್ನ 1.30ರ ಸುಮಾರಿಗೆ ಏಕಾಏಕಿ ಗುಡುಗು, ಗಾಳಿ ಸಹಿತ ಉತ್ತಮ ಮಳೆಯಾಗಿದೆ.
ಧೂಳುಮಯವಾಗಿದ್ದ ರಸ್ತೆಯೂ ಈ ಮಳೆಯ ಸಿಂಚನದಿಂದ ವಾಹನ ಸವಾರರು, ಪಾದಚಾರಿಗಳು ನಿಟ್ಟುಸಿರು ಬಿಡುವಂತಾಗಿದೆ. ಅದಲ್ಲದೆ ಬೆಂಗಳೂರಿನ ಹಲವೆಡೆ ನೀರಿನ ಸಮಸ್ಯೆ ಉಂಟಾಗಿದ್ದು, ಇದೀಗ ವರುಣ ಆಗಮನದಿಂದ ನೀರಿನ ಸಮಸ್ಯೆಗೆ ಪರಿಹಾರ ಸಿಗಬಹುದೇ ಎಂಬುದು ಕಾಯಬೇಕಿದೆ.
ಇನ್ನೂ ಹವಾಮಾನ ಇಲಾಖೆ ಪ್ರಕಾರ ಮುಂದಿನ ಒಂದು ವಾರವೂ ನಗರದಲ್ಲಿ ಉತ್ತಮ ಮಳೆಯಾಗುವ ಮುನ್ಸೂಚನೆಯನ್ನು ನೀಡಿದೆ.