ಬೆಂಗಳೂರು: ವಿಧಾನಸಭೆ ಚುನಾವಣೆ ವೇಳೆ ಬಿಜೆಪಿಯಿಂದ ಕಾಂಗ್ರೆಸ್ ಗೆ ಹಾರಿದ್ದ ಮಾಜಿ ಸಿಎಂ ಜಗದೀಶ್ ಶೆಟ್ಟರ್ ಇದೀಗ ಮತ್ತೆ ಮಾತೃ ಪಕ್ಷಕ್ಕೆ ಮರಳಿದ್ದಾರೆ.
ವಿಧಾನಸಭೆ ಚುನಾವಣೆ ವೇಳೆ ಬಿಜೆಪಿಯಿಂದ ಟಿಕೆಟ್ ಸಿಗದೇ ಇದ್ದಿದ್ದಕ್ಕೆ ಅಸಮಾಧಾನಗೊಂಡಿದ್ದ ಜಗದೀಶ್ ಶೆಟ್ಟರ್ ಕಾಂಗ್ರೆಸ್ ಗೆ ಸೇರ್ಪಡೆಯಾಗಿದ್ದರು. ಬಳಿಕ ವಿಧಾನಸಭೆ ಚುನಾವಣೆಯಲ್ಲಿ ಸೋತರೂ ಕಾಂಗ್ರೆಸ್ ಅವರಿಗೆ ಎಂಎಲ್ ಸಿ ಸ್ಥಾನ ನೀಡಿತ್ತು. ಆದರೆ ಈಗ ಒಂದೇ ವರ್ಷಕ್ಕೆ ಮತ್ತೆ ಬಿಜೆಪಿಗೆ ವಾಪಸ್ ಆಗಿದ್ದಾರೆ.
ಮಾಜಿ ಸಿಎಂ ಯಡಿಯೂರಪ್ಪ, ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ, ಕೇಂದ್ರ ಸಚಿವ ಭುಪೇಂದ್ರ ಯಾದವ್, ರಾಜೀವ್ ಚಂದ್ರಶೇಖರ್ ಸಮ್ಮುಖದಲ್ಲಿ ಮರಳಿ ಬಿಜೆಪಿಗೆ ಬಂದಿದ್ದಾರೆ. ಇದಕ್ಕೂ ಮುನ್ನ ಅವರು ದೆಹಲಿಯಲ್ಲಿ ಗೃಹಸಚಿವ ಅಮಿತ್ ಶಾ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದರು.
ಆಗಲೇ ಶೆಟ್ಟರ್ ಮರಳಿ ಬಿಜೆಪಿಗೆ ಸೇರ್ಪಡೆಯಾಗಲಿದ್ದಾರೆ ಎಂಬ ಗುಸು ಗುಸು ಕೇಳಿಬಂದಿತ್ತು. ಆದರೆ ಕಾಂಗ್ರೆಸ್ ನಾಯಕರು, ಸಿಎಂ ಸಿದ್ದರಾಮಯ್ಯ ಇದೆಲ್ಲಾ ಸುಳ್ಳು, ಶೆಟ್ಟರ್ ಯಾವುದೇ ಕಾರಣಕ್ಕೂ ಕಾಂಗ್ರೆಸ್ ಬಿಡಲ್ಲ. ಇದು ಬಿಜೆಪಿಯವರೇ ಹರಡುತ್ತಿರುವ ಸುಳ್ಳು ಸುದ್ದಿ ಎಂದಿದ್ದರು.
ಇದೀಗ ಬಿಜೆಪಿ ಸೇರ್ಪಡೆ ಮುನ್ನ ಎಂಎಲ್ ಸಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್, ವಿಧಾನಪರಿಷತ್ ಸಭಾಪತಿ ಬಸವರಾಜ ಹೊರಟ್ಟಿಗೆ ಪತ್ರ ಬರೆದು ರಾಜೀನಾಮೆ ಸಲ್ಲಿಸಿದ್ದಾರೆ.
ಬಿಜೆಪಿ ಮರು ಸೇರ್ಪಡೆ ಬಗ್ಗೆ ಜಗದೀಶ್ ಶೆಟ್ಟರ್ ಹೇಳಿದ್ದೇನು?
ನಾನು ಪಕ್ಷಕ್ಕೆ ವಾಪಸಾಗಬೇಕೆಂದು ನಾಯಕರ ಅಪೇಕ್ಷೆಯಿತ್ತು. ಅಮಿತ್ ಶಾ ಅವರು ಅತ್ಯಂತ ಗೌರವದಿಂದ ಬರಮಾಡಿಕೊಂಡರು. ಬಿಜೆಪಿಗೆ ಮರು ಸೇರ್ಪಡೆಯಾಗಿದ್ದಕ್ಕೆ ಸಂತೋಷವಿದೆ. ಈ ಮೊದಲು ಕಾಂಗ್ರೆಸ್ ನವರೂ ನನ್ನನ್ನು ಗೌರವದಿಂದ ನಡೆಸಿಕೊಂಡಿದ್ದರು. ಸಿಎಂ ಸಿದ್ದರಾಮಯ್ಯ, ಡಿಕೆ ಶಿವಕುಮಾರ್ ಅವರಿಗೆ ಧನ್ಯವಾದ ಸಲ್ಲಿಸುತ್ತೇನೆ ಎಂದಿದ್ದಾರೆ.
ಲೋಕಸಭೆ ಚುನಾವಣೆಗೆ ಮುನ್ನ ಹುಬ್ಬಳ್ಳಿ-ಧಾರವಾಡ ಪ್ರದೇಶದಲ್ಲಿ ಬಿಜೆಪಿ ಬಲಪಡಿಸಲು ಪ್ರಬಲ ನಾಯಕನ ಅಗತ್ಯ ಬಿಜೆಪಿಗೂ ಇತ್ತು. ಹೀಗಾಗಿ ಈಗ ಶೆಟ್ಟರ್ ಸೇರ್ಪಡೆ ಪಕ್ಷಕ್ಕೆ ಬಲ ತುಂಬಲಿದೆ.