ಬೆಂಗಳೂರು (ಜು.24): ಕೌಶಲ್ಯ ಮಾಸದ ಪ್ರಯುಕ್ತ ರಾಜ್ಯದಲ್ಲಿ ಕೌಶಲ್ಯಾಭಿವೃದ್ಧಿ ನಿಗಮವು ಶುಕ್ರವಾರ ಹಮ್ಮಿಕೊಂಡಿದ್ದ ಮೊದಲ ದಿನದ ವರ್ಚುಯಲ್ ಉದ್ಯೋಗ ಮೇಳದಲ್ಲಿ ಭಾಗವಹಿಸಿದ್ದ 5,000 ಯುವಕ ಯುವತಿಯರ ಪೈಕಿ 1,000 ಯುವಜನರು ವಿವಿಧ ಕಂಪನಿಗಳ ಉದ್ಯೋಗಕ್ಕೆ ಆಯ್ಕೆಯಾಗಿದ್ದಾರೆ ಎಂದು ಕೌಶಲ್ಯಾಭಿವೃದ್ಧಿ ಖಾತೆ ಸಚಿವರೂ ಆದ ಉಪ ಮುಖ್ಯಮಂತ್ರಿ ಡಾ.ಸಿ.ಎನ್. ಅಶ್ವತ್ಥನಾರಾಯಣ ತಿಳಿಸಿದರು.
•ಕೌಶಲ್ಯ ಮಾಸದ ಪ್ರಯುಕ್ತ ರಾಜ್ಯದಲ್ಲಿ ಕೌಶಲ್ಯಾಭಿವೃದ್ಧಿ ನಿಗಮವು ಶುಕ್ರವಾರ ಹಮ್ಮಿಕೊಂಡಿದ್ದ ಮೊದಲ ದಿನದ ವರ್ಚುಯಲ್ ಉದ್ಯೋಗ ಮೇಳ
• 5,000 ಯುವಕ ಯುವತಿಯರ ಪೈಕಿ 1,000 ಯುವಜನರು ವಿವಿಧ ಕಂಪನಿಗಳ ಉದ್ಯೋಗಕ್ಕೆ ಆಯ್ಕೆಯಾಗಿದ್ದಾರೆ
ಬೆಂಗಳೂರಿನಲ್ಲಿ ವರ್ಚುಯಲ್ ಮೇಳದಲ್ಲಿ ಭಾಗವಹಿಸಿದ ನಂತರ ಮಾಹಿತಿ ನೀಡಿದ ಅವರು, ಸಾಂಕೇತಿಕವಾಗಿ ಕೆಲ ಯುವಕ ಯುವತಿಯರಿಗೆ ನೇಮಕಾತಿ ಪತ್ರಗಳನ್ನು ವಿತರಣೆ ಮಾಡಲಾಯಿತು. ಉಳಿದವರಿಗೆ ಪ್ರಕ್ರಿಯೆಯಂತೆ ವಿತರಿಸಲಾಗುವುದು ಎಂದರು.
ಉದ್ಯೋಗಾಂಕ್ಷಿಗಳು ಮತ್ತು ಉದ್ಯೋಗದಾತ ಕಂಪನಿಗಳ ಜತೆ ಕೌಶಲ್ಯಾಭಿವೃದ್ಧಿ ನಿಗಮವು ಸೇತುವೆಯಾಗಿ ಕೆಲಸ ಮಾಡುತ್ತಿದ್ದು, ಉದ್ಯೋಗ ಮೇಳಗಳು ತಿಂಗಳಪೂರ್ತಿ ಮುಂದುವರಿಯುತ್ತವೆ. ಈ ಮೇಳದಲ್ಲಿ ಎಚ್ಜಿಎಸ್, ಆದಿತ್ಯ ಬಿರ್ಲಾ, ಸನ್ಸೆರಾ ಎಂಜಿನಿಯರಿಂಗ್, ಐಬಿಎಂ ಇಂಡಿಯಾ, ವಿಪ್ರೋ, ಟೀಮ್ ಲೀಸ್ ಸೇರಿದಂತೆ 20ಕ್ಕೂ ಹೆಚ್ಚು ಕಂಪೆನಿಗಳು ಭಾಗವಹಿಸಿದ್ದವು ಎಂದು ಮಾಹಿತಿ ನೀಡಿದರು.
ಜಪಾನ್ನಲ್ಲಿ ಉದ್ಯೋಗಾವಕಾಶ: ಐದು ಲಕ್ಷ ಭಾರತೀಯರಿಗೆ ಉದ್ಯೋಗಾವಕಾಶ ನೀಡಲು ಜಪಾನ್ ಮುಂದೆ ಬಂದಿದ್ದು, ಈ ಬಗ್ಗೆ ಭಾರತ ಸರ್ಕಾರದ ಜತೆ ಒಪ್ಪಂದ ಮಾಡಿಕೊಂಡಿದೆ. ಇದೇ ಇನ್ನಿತರೆ ದೇಶಗಳು ಭಾರತೀಯ ಕುಶಲ ಮಾನವ ಸಂಪನ್ಮೂಲಕ್ಕೆ ಬೇಡಿಕೆ ಇಟ್ಟಿವೆ. ಬ್ರಿಟನ್ಗೆ 1,000 ಶುಶ್ರೂಷಕರನ್ನು ಕಳಿಸುವ ಬಗ್ಗೆಯೂ ಒಪ್ಪಂದ ಆಗಿದೆ ಎಂದರು.
ಕೌಶಲ್ಯಾಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕ ಅಶ್ವಿನ್ ಗೌಡ, ಇಲಾಖೆಯ ಉಪ ಕಾರ್ಯದರ್ಶಿ ಮಾರುತಿ ಪ್ರಸನ್ನ ಮುಂತಾದ ಹಿರಿಯ ಅಧಿಕಾರಿಗಳು ಹಾಜರಿದ್ದರು.