ಬೆಂಗಳೂರು: ಕರ್ನಾಟಕದಲ್ಲಿ ಖಾಸಗಿ ವಲಯದಲ್ಲೂ ಕನ್ನಡಿಗರಿಗೆ ಮೀಸಲಾತಿ ನೀಡುವ ಸರ್ಕಾರದ ನೀತಿಗೆ ಕನ್ನಡ ಸಂಘಟನೆಗಳು ಹರ್ಷ ವ್ಯಕ್ತಪಡಿಸಿವೆ. ಜೊತೆಗೆ ಈ ಸಂಬಂಧ ಸಿಎಂ ಸಿದ್ದರಾಮಯ್ಯರನ್ನು ಭೇಟಿ ಮಾಡಿ ಅಭಿನಂದನೆ ಸಲ್ಲಿಸಿದೆ.
ಕರ್ನಾಟಕದಲ್ಲಿ ಇನ್ನು ಮುಂದೆ ಖಾಸಗಿ ಸಂಸ್ಥೆಗಳಲ್ಲಿ ಮ್ಯಾನೇಜರ್ ಲೆವೆಲ್ ಹುದ್ದೆಗಳಲ್ಲಿ ಶೇ.50 ಮತ್ತು ಇತರೆ ಹುದ್ದೆಗಳಲ್ಲಿ ಶೇ.75 ರಷ್ಟು ಕನ್ನಡಿಗರಿಗೆ ಮೀಸಲಾತಿ ನೀಡಬೇಕು ಎಂಬ ಹೊಸ ಮಸೂದೆಯನ್ನು ಮೊನ್ನೆಯಷ್ಟೇ ವಿಧಾನಸಭೆಯಲ್ಲಿ ಪಾಸ್ ಮಾಡಲಾಗಿತ್ತು.
ಈ ಮಸೂದೆ ಬಗ್ಗೆ ಈಗ ಪರ-ವಿರೋಧ ಚರ್ಚೆ ಶುರುವಾಗಿದೆ. ಕೆಲವು ಉದ್ಯಮಿಗಳು ಈಗಾಗಲೇ ಈ ನೀತಿಯನ್ನು ಬಹಿರಂಗವಾಗಿಯೇ ವಿರೋಧಿಸಿವೆ. ಇದರಿಂದ ಕೆಲವು ಉದ್ಯಮಗಳು ಕರ್ನಾಟಕದಲ್ಲಿ ಹೂಡಿಕೆ ಮಾಡಲು ಹಿಂದೇಟು ಹಾಕಬಹುದು ಎಂಬ ಮಾತೂ ಕೇಳಿಬರುತ್ತಿವೆ.
ಆದರೆ ಕನ್ನಡಿಗರಿಂದ ಇದಕ್ಕೆ ಸಕಾರಾತ್ಮಕ ಸ್ಪಂದನೆ ವ್ಯಕ್ತವಾಗುತ್ತಿದೆ. ಕನ್ನಡಿಗರಿಗೆ ಉದ್ಯೋಗ ಮೀಸಲಾತಿ ವಿಧೇಯಕ ಜಾರಿಗೆ ತರುತ್ತಿರುವ ಮುಖ್ಯಮಂತ್ರಿ ಸಿದ್ಧರಾಮಯ್ಯನವರನ್ನು ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷ ಟಿ.ಎ.ನಾರಾಯಣಗೌಡರು ಅಭಿನಂದಿಸಿದರು. ಈ ಸಂದರ್ಭದಲ್ಲಿ ಕರವೇ ರಾಜ್ಯ ಉಪಾಧ್ಯಕ್ಷರಾದ ಅಶ್ವಿನಿ ಗೌಡ, ರಾಜ್ಯ ಪ್ರಧಾನ ಕಾರ್ಯದರ್ಶಿ ಬಿ.ಸಣ್ಣೀರಪ್ಪ, ರಾಜ್ಯ ಸಂಘಟನಾ ಕಾರ್ಯದರ್ಶಿ ಅಬ್ಬಿಗೆರೆ ವಿನೋದ್ ಉಪಸ್ಥಿತರಿದ್ದರು.