ಬೆಂಗಳೂರು: ಚಂದಾಪುರ ಸೂರ್ಯಸಿಟಿಯ ಎಸ್‌ಬಿಐ ಬ್ಯಾಂಕ್ ಮ್ಯಾನೇಜರ್ ಗ್ರಾಹಕರ ಜತೆ ಕನ್ನಡದಲ್ಲಿ ವ್ಯವಹರಿಸಲು ನಿರಾಕರಿಸಿ, ದುರ್ವರ್ತನೆ ಮೆರೆದಿರುವುದು ಅಕ್ಷಮ್ಯ ಎಂದು ಡಿಸಿಎಂ ಡಿಕೆ ಶಿವಕುಮಾರ್ ಹೇಳಿದ್ದಾರೆ.
ಈ ವಿಚಾರವಾಗಿ ಅವರು ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಪೋಸ್ಟ್ ಹಾಕಿದ್ದಾರೆ.
ಕನ್ನಡ ನಾಡು, ನುಡಿಗೆ ಅಪಮಾನವಾಗುವ ಇಂತಹ ಘಟನೆಗಳನ್ನು ಸರಕಾರ ಸಹಿಸುವುದಿಲ್ಲ. ಗ್ರಾಹಕರಿಗೆ ಅನುಕೂಲವಾಗುವ ಸ್ಥಳೀಯ ಭಾಷೆಯಲ್ಲೇ ಸಂವಹನ ಮಾಡುವುದು ಬ್ಯಾಂಕ್ ಸಿಬ್ಬಂದಿ ಕರ್ತವ್ಯ. ಕಡ್ಡಾಯವೂ ಹೌದು. ಇಂಥ ಘಟನೆಗಳು ಮರುಕಳಿಸದಂತೆ ಎಚ್ಚರ ವಹಿಸದಿದ್ದರೆ ಕಟ್ಟುನಿಟ್ಟಿನ ಕ್ರಮ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ.
ಸೂರ್ಯಸಿಟಿ ಎಸ್‌ಬಿಐ ಬ್ಯಾಂಕ್‌ನಲ್ಲಿ ಮಂಗಳವಾರ ಅವರು ಗ್ರಾಹಕರೊಂದಿಗೆ ಮಾತಿನ ಚಕಮಕಿ ನಡೆಸಿದ್ದು, ಇದು ಭಾರತ, ಹಾಗಾಗಿ ಕನ್ನಡ ಮಾತನಾಡುವುದಿಲ್ಲ ಎಂದು ಹಿಂದಿಯಲ್ಲಿ ಹೇಳಿರುವ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿತ್ತು.
ಆಯಾ ರಾಜ್ಯಗಳಲ್ಲಿ ಸ್ಥಳೀಯ ಭಾಷೆ ಮಾತನಾಡುವಂತೆ ಆರ್‌ಬಿಐ ತಿಳಿಸಿದೆ. ಹಾಗಾಗಿ ಬ್ಯಾಂಕ್ ಸಿಬ್ಬಂದಿ ಕಡ್ಡಾಯವಾಗಿ ಕನ್ನಡ ಮಾತನಾಡಬೇಕು. ಆದರೆ ಚಂದಾಪುರ ಎಸ್‌ಬಿಐ ಶಾಖೆಯ ಮ್ಯಾನೇಜರ್ ಕನ್ನಡ ಮಾತನಾಡುವುದಿಲ್ಲ ಎಂದು ಹೇಳಿ ಕನ್ನಡಿಗರ ಆಕ್ರೋಶಕ್ಕೆ ಕಾರಣರಾಗಿದ್ದರು.
ಕನ್ನಡ ಮಾತಾಡುವುದೇ ಇಲ್ಲ ಎಂದು ಹೇಳಿ ಆಕ್ರೋಶಕ್ಕೆ ಗುರಿಯಾಗಿದ್ದ ಸೂರ್ಯಸಿಟಿಯ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್‌ಬಿಐ) ಶಾಖೆಯ ವ್ಯವಸ್ಥಾಪಕಿ ಪ್ರಿಯಾಂಕ ಸಿಂಗ್ ಅವರನ್ನು ವರ್ಗಾವಣೆ ಮಾಡಲಾಗಿದೆ. ಈ ಕ್ರಮಕ್ಕೆ ಸಿಎಂ ಸಿದ್ದರಾಮಯ್ಯ ಅವರು ಮೆಚ್ಚುಗೆ ವ್ಯಕ್ತಪಡಿಸಿದ್ದರು.