ಬೆಂಗಳೂರು: ಆನೇಕಲ್ ತಾಲೂಕಿನ ಎಸ್ ಬಿಐ ಬ್ಯಾಂಕ್ ಬ್ರಾಂಚ್ ನ ಮ್ಯಾನೇಜರ್ ಕನ್ನಡ ಮಾತನಾಡಲ್ಲ ಎಂದು ದರ್ಪ ತೋರಿದ್ದ ವಿಡಿಯೋ ವೈರಲ್ ಆಗಿತ್ತು. ಇದೀಗ ಮ್ಯಾನೇಜರ್ ನನ್ನು ಎತ್ತಂಗಡಿ ಮಾಡಲಾಗಿದೆ.
ಎಸ್ ಬಿಐ ಬ್ಯಾಂಕ್ ನ ಮಹಿಳಾ ವ್ಯವಸ್ಥಾಪಕಿ ಗ್ರಾಹಕರೊಂದಿಗೆ ಕನ್ನಡದಲ್ಲಿ ಮಾತನಾಡಲು ನಿರಾಕರಿಸಿದ್ದಳು. ಯಾವುದೇ ಕಾರಣಕ್ಕೂ ನಾನು ಕನ್ನಡದಲ್ಲಿ ಮಾತನಾಡಲ್ಲ. ಇದು ಭಾರತ, ಹಿಂದಿಯಲ್ಲಿ ಮಾತನಾಡ್ತೀನಿ ಎಂದು ಅಹಂಕಾರ ತೋರಿದ್ದಳು.
ಸ್ಥಳೀಯ ಗ್ರಾಹಕರೊಂದಿಗೆ ಸ್ಥಳೀಯ ಭಾಷೆಯಲ್ಲಿ ಮಾತನಾಡಬೇಕು ಎಂಬ ನಿಯಮವಿದ್ದರೂ ದರ್ಪ ಪ್ರದರ್ಶಿಸಿದ್ದಕ್ಕೆ ಕನ್ನಡ ಪರ ಸಂಘಟನೆಗಳು ಬ್ಯಾಂಕ್ ಗೆ ತೆರಳಿ ಆಕ್ಷೇಪ ವ್ಯಕ್ತಪಡಿಸಿದ್ದರು. ಇದರ ಬೆನ್ನಲ್ಲೇ ಆಕೆ ಕ್ಷಮೆ ಯಾಚಿಸಿದ್ದಳು.
ಆದರೂ ಈಗ ಆ ವ್ಯವಸ್ಥಾಪಕಿಯನ್ನು ವರ್ಗಾವಣೆ ಮಾಡಲಾಗಿದೆ. ಘಟನೆ ಸಿಎಂ ಸಿದ್ದರಾಮಯ್ಯ ಗಮನಕ್ಕೂ ಬಂದಿದ್ದು, ಮಹಿಳಾ ವ್ಯವಸ್ಥಾಪಕಿಯನ್ನು ವರ್ಗಾವಣೆ ಮಾಡಿರುವುದಕ್ಕೆ ಎಸ್ ಬಿಐ ಅಧಿಕಾರಿಗಳನ್ನು ಅಭಿನಂದಿಸಿದ್ದಾರೆ. ಮುಂದಿನ ದಿನಗಳಲ್ಲಿ ಇಂತಹ ಘಟನೆಗಳು ಪುನರಾವರ್ತನೆಯಾಗದಂತೆ ಸ್ಥಳೀಯ ಭಾಷೆ ಕಲಿಕೆಗೆ ತರಬೇತಿ ನೀಡುವಂತೆ ಸೂಚನೆ ನೀಡಿದ್ದಾರೆ.