ಬೆಂಗಳೂರು: ಮಾರ್ಚ್ 22 ರಂದು ವಾಟಾಳ್ ನಾಗರಾಜ್ ನೇತೃತ್ವದಲ್ಲಿ ಕೆಲವು ಕನ್ನಡ ಪರ ಸಂಘಟನೆಗಳು ಕರ್ನಾಟಕ ಬಂದ್ ಗೆ ಕರೆ ನೀಡಿದ್ದು ಇದಕ್ಕೆ ಕೆಲವು ಕನ್ನಡ ಸಂಘಟನೆಗಳು ಬೆಂಬಲ ನೀಡುತ್ತಿಲ್ಲ.
ಬೆಳಗಾವಿಯಲ್ಲಿ ಮರಾಠಿ-ಕನ್ನಡ ಸಂಘರ್ಷದ ಬಳಿಕ ವಿವಿಧ ಬೇಡಿಕೆಗಳನ್ನು ಮುಂದಿಟ್ಟುಕೊಂಡು ಕೆಲವು ಕನ್ನಡ ಸಂಘಟನೆಗಳು ಕರ್ನಾಟಕ ಬಂದ್ ಗೆ ಕರೆ ನೀಡಿವೆ. ಎಂಇಎಸ್ ನಿಷೇಧ ಮಾಡಬೇಕು, ಬೆಳಗಾವಿಯಲ್ಲಿ ಮರಾಠಿಗರ ದಬ್ಬಾಳಿಕೆ ನಿಲ್ಲಬೇಕು ಎಂಬಿತ್ಯಾದಿ ಬೇಡಿಕೆಗಳನ್ನು ಮುಂದಿಟ್ಟುಕೊಂಡು ಬಂದ್ ಗೆ ಕರೆ ನೀಡಲಾಗಿದೆ.
ಆದರೆ ಇದಕ್ಕೆ ಕನ್ನಡ ಸಂಘಟನೆಗಳಲ್ಲೇ ಒಗ್ಗಟ್ಟಿಲ್ಲ. ಕೆಲವು ಸಂಘ ಸಂಸ್ಥೆಗಳು ಬಂದ್ ಗೆ ಬೆಂಬಲವಿಲ್ಲ ಎಂದಿದ್ದಾರೆ. ಹೀಗಾಗಿ ಇಂದು ಬಂದ್ ಗೆ ಬೆಂಬಲ ಕೊಡಿ ಎಂದು ವಾಟಾಳ್ ನಾಗರಾಜ್ ಬೆಂಗಳೂರಿನಲ್ಲಿ ರಾಲಿ ಮಾಡಿ ಬೆಂಬಲ ಕೋರಲಿದ್ದಾರೆ.
ಇನ್ನು, ಕರ್ನಾಟಕ ಬಂದ್ ಬೇಡ ಎಂದು ಪೋಷಕರು, ಶಿಕ್ಷಣ ಸಂಸ್ಥೆಗಳು ಆಗ್ರಹಿಸಿವೆ. ಈಗಾಗಲೇ ವಾರ್ಷಿಕ ಪರೀಕ್ಷೆಗಳು ನಡೆಯುತ್ತಿವೆ. ಈ ಸಂದರ್ಭದಲ್ಲಿ ಬಂದ್ ನಡೆಸಿದರೆ ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗುವುದು ಹೇಗೆ ಎಂದು ಪೋಷಕರು ಪ್ರಶ್ನಿಸುತ್ತಿದ್ದಾರೆ.