ಬೆಂಗಳೂರು: ಟಿ20 ವಿಶ್ವಕಪ್ ಫೈನಲ್ ಗೆದ್ದ ಟೀಂ ಇಂಡಿಯಾಗೆ ಬಿಸಿಸಿಐ 125 ಕೋಟಿ ರೂ. ಬಹುಮಾನ ಘೋಷಣೆ ಮಾಡಿತ್ತು. ಈ ಬಹುಮಾನ ಮೊತ್ತ ಆಟಗಾರರು ಮಾತ್ರವಲ್ಲದೆ, ಕೋಚಿಂಗ್ ಸಿಬ್ಬಂದಿಗೂ ವಿತರಣೆಯಾಗಲಿದೆ. ಆದರೆ ಈ ಬಹುಮಾನ ಹಣದಲ್ಲಿ ನಿರ್ಗಮಿತ ಕೋಚ್ ರಾಹುಲ್ ಪಡೆದುಕೊಂಡಿದ್ದು ಎಷ್ಟು ಗೊತ್ತಾ?
ಈ ಟಿ20 ವಿಶ್ವಕಪ್ ಟೀಂ ಇಂಡಿಯಾ ಕೋಚ್ ಆಗಿ ರಾಹುಲ್ ದ್ರಾವಿಡ್ ಗೆ ಕೊನೆಯ ಸರಣಿಯಾಗಿತ್ತು. ಇದೀಗ ದ್ರಾವಿಡ್ ಕೋಚ್ ಹುದ್ದೆಗೆ ನಿವೃತ್ತಿ ಹೇಳಿದ್ದಾರೆ. ಅವರ ಸ್ಥಾನಕ್ಕೆ ಮಾಜಿ ಕ್ರಿಕೆಟಿಗ ಗೌತಮ್ ಗಂಭೀರ್ ರನ್ನು ಆಯ್ಕೆ ಮಾಡಲಾಗಿದೆ. ಆದರೆ ಟಿ20 ವಿಶ್ವಕಪ್ ಬಹುಮಾನ ಮೊತ್ತದಲ್ಲಿ ಪಾಲು ಪಡೆಯುವಾಗ ದ್ರಾವಿಡ್ ಬಿಸಿಸಿಐಗೆ ವಿಶೇಷ ಮನವಿ ಮಾಡಿದ್ದಾರಂತೆ.
ಮುಖ್ಯ ಕೋಚ್ ಆಗಿದ್ದ ದ್ರಾವಿಡ್ ಗೆ ಬಹುಮಾನ ಮೊತ್ತದಲ್ಲಿ 5 ಕೋಟಿ ರೂ. ನೀಡಲು ತೀರ್ಮಾನಿಸಲಾಗಿತ್ತು. ಇತರೆ ಸಹಾಯಕ ಸಿಬ್ಬಂದಿಗಳಿಗೆ 2.5 ಕೋಟಿ ರೂ. ನಿಗದಿಯಾಗಿತ್ತು. ಆದರೆ ದ್ರಾವಿಡ್ ತಮಗೂ ಇತರೆ ಸಹಾಯಕ ಸಿಬ್ಬಂದಿಗಳಂತೆ 2.5 ಕೋಟಿ ರೂ. ಬಹುಮಾನ ಮೊತ್ತ ಸಾಕು ಎಂದು ಮನವಿ ಮಾಡಿದ್ದಾರಂತೆ.
ದ್ರಾವಿಡ್ ರ ಈ ಹೃದಯ ವೈಶಾಲ್ಯತೆಗೆ ಮತ್ತೊಮ್ಮೆ ಅಭಿಮಾನಿಗಳು ಮಾರು ಹೋಗಿದ್ದಾರೆ. ನನ್ನಷ್ಟೇ ನನ್ನ ಇತರೆ ಕೋಚಿಂಗ್ ಸ್ಟಾಫ್ ಕೂಡಾ ಶ್ರಮ ಹಾಕಿದ್ದಾರೆ. ಹೀಗಾಗಿ ಅವರಿಗೆ ಎಷ್ಟು ಕೊಡುತ್ತೀರೋ ನನಗೂ ಅಷ್ಟೇ ಕೊಡಿ ಎಂದು ದ್ರಾವಿಡ್ ದೊಡ್ಡತನ ಮೆರೆದಿದ್ದಾರೆ. ಇದಕ್ಕೇ ಅಲ್ಲವೇ ಅವರನ್ನು ಸಹೃದಯ ಕ್ರಿಕೆಟಿಗ ಎನ್ನುವುದು.
ಈ ಮೊದಲು ಅಂಡರ್ 19 ವಿಶ್ವಕಪ್ ಗೆದ್ದಾಗಲೂ ದ್ರಾವಿಡ್ ಇದೇ ರೀತಿ ಮಾಡಿದ್ದರು. ಕೋಚ್ ದ್ರಾವಿಡ್ ಗೆ 50 ಲಕ್ಷ ರೂ. ಮತ್ತು ಇತರೆ ಸಹಾಯಕ ಸಿಬ್ಬಂದಿಗಳಿಗೆ 25 ಲಕ್ಷ ರೂ. ಬಹುಮಾನ ನಿಗದಿಯಾಗಿತ್ತು. ಆಗಲೂ ದ್ರಾವಿಡ್ ನನಗೂ 25 ಲಕ್ಷ ಕೊಡಿ ಸಾಕು ಎಂದಿದ್ದರು.