ಬೆಂಗಳೂರು: ಇತ್ತೀಚೆಗೆ ಟಿ20 ವಿಶ್ವಕಪ್ ಗೆದ್ದ ಟೀಂ ಇಂಡಿಯಾ ಕೋಚ್ ರಾಹುಲ್ ದ್ರಾವಿಡ್ ಮತ್ತು ಥ್ರೋ ಡೌನ್ ಸ್ಪೆಷಲಿಸ್ಟ್ ರಾಘವೇಂದ್ರಗೆ ರಾಜ್ಯ ಸರ್ಕಾರದಿಂದ ಬಹುಮಾನ ಹಣ ಬಿಡಿ, ಒಂದು ಸಣ್ಣ ಸನ್ಮಾನವೂ ಇಲ್ಲದೇ ಇರುವುದು ಅಭಿಮಾನಿಗಳ ಆಕ್ರೋಶಕ್ಕೆ ಕಾರಣವಾಗಿದೆ.
ಟಿ20 ವಿಶ್ವಕಪ್ ಗೆಲ್ಲಿಸಿಕೊಟ್ಟ ನಾಯಕ ರೋಹಿತ್ ಶರ್ಮಾ, ಮಹತ್ವದ ಕ್ಯಾಚ್ ಪಡೆದಿದ್ದ ಸೂರ್ಯಕುಮಾರ್ ಯಾದವ್, ಶಿವಂ ದುಬೆ, ಯಶಸ್ವಿ ಜೈಸ್ವಾಲ್ ರನ್ನು ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ ಶಿಂಧೆ ಭಾರತಕ್ಕೆ ಬಂದ ಮರುದಿನವೇ ವಿಧಾನಸಭೆಗೆ ಕರೆಸಿ ಸನ್ಮಾನ ಏರ್ಪಡಿಸಿತ್ತು.
ಕುಲದೀಪ್ ಯಾದವ್ ರನ್ನು ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಗೌರವಿಸಿದ್ದರು. ಮೊಹಮ್ಮದ್ ಸಿರಾಜ್ ಗೆ ಅವರ ತವರು ರಾಜ್ಯ ತೆಲಂಗಾಣದಲ್ಲಿ ಸಿಎಂ ರೇವಂತ್ ರೆಡ್ಡಿ ಗೌರವಿಸಿದ್ದರು. ಆದರೆ ಕರ್ನಾಟಕ ಮೂಲಕ ರಾಹುಲ್ ದ್ರಾವಿಡ್ ಮತ್ತು ಥ್ರೋ ಡೌನ್ ಸ್ಪೆಷಲಿಸ್ಟ್ ರಾಘವೇಂದ್ರಗೆ ಸನ್ಮಾನವೇ ನಡೆಸಿಲ್ಲ.
ಇದರ ಬಗ್ಗೆ ಅಭಿಮಾನಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ವಿಶ್ವಕಪ್ ಗೆಲುವಿಗಾಗಿ ಇಡೀ ವಿಶ್ವವೇ ರಾಹುಲ್ ದ್ರಾವಿಡ್ ರನ್ನು ಕೊಂಡಾಡಿತ್ತು. ಜೊತೆಗೆ ಬ್ಯಾಟಿಗರ ಅಭ್ಯಾಸಕ್ಕೆ ಕೊಡುಗೆ ನೀಡುತ್ತಿರುವ ಥ್ರೋ ಡೌನ್ ಸ್ಪೆಷಲಿಸ್ಟ್ ರಾಘವೇಂದ್ರ ಕೂಡಾ ಅಪ್ಪಟ ಕನ್ನಡಿಗರು. ಆದರೆ ಇವರಿಬ್ಬರನ್ನೂ ಕನಿಷ್ಠ ಪಕ್ಷ ಗೌರವಿಸುವ ಸೌಜನ್ಯವನ್ನೂ ರಾಜ್ಯ ಸರ್ಕಾರ ಮಾಡಿಲ್ಲ ಎನ್ನುವುದು ಎಲ್ಲರ ಆಕ್ರೋಶಕ್ಕೆ ಕಾರಣವಾಗಿದೆ.