ರಾಹುಲ್ ಗಾಂಧಿ ಪ್ರತಿಕೃತಿ ದಹಿಸಲು ಹೊರಟ ಬಿಜೆಪಿ ನಾಯಕರ

Krishnaveni K

ಶನಿವಾರ, 14 ಸೆಪ್ಟಂಬರ್ 2024 (14:16 IST)
ಬೆಂಗಳೂರು: ರಾಹುಲ್ ಗಾಂಧಿಯವರು ನಾಯಕರಲ್ಲ; ಒಬ್ಬ ಅಪ್ರಬುದ್ಧ ವ್ಯಕ್ತಿ ಎಂದು ವಿಧಾನ ಪರಿಷತ್ತಿನ ಪ್ರತಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಅವರು ತಿಳಿಸಿದರು.

ಮಾಧ್ಯಮ ಪ್ರತಿನಿಧಿಗಳ ಜೊತೆ ಇಂದು ಮಾತನಾಡಿದ ಅವರು, ಪಾಳು ಬಿದ್ದ ಮನೆಗೆ ಉಳಿದವನೇ ನಾಯಕ ಎಂಬಂತೆ ಅವರು ಮುಖಂಡರಾಗಿದ್ದಾರೆ. ನೆಹರೂ ಅವರು ತಾವು ಮೀಸಲಾತಿ ವಿರೋಧಿ ಎಂದಿದ್ದರು. ಇಂದಿರಾಗಾಂಧಿ, ರಾಜೀವ್ ಗಾಂಧಿಯವರೂ ಅದನ್ನೇ ಮುಂದುವರೆಸಿದ್ದರು. ಈಗ ರಾಹುಲ್ ಗಾಂಧಿಯವರು ಈ ಪರಂಪರೆಯನ್ನು ಮುಂದುವರೆಸಿದ್ದಾರೆ ಎಂದು ಟೀಕಿಸಿದರು.

ರಾಹುಲ್ ಗಾಂಧಿಯವರು ಲೋಕಸಭೆಯ ವಿಪಕ್ಷ ನಾಯಕರಾಗಿದ್ದು, ಅವರನ್ನು ನಾನು ಗೌರವಿಸಲೇಬೇಕು. ಈ ಗೌರವ ಬೇರೆ; ಭಾರತ ದೇಶದಲ್ಲಿ ತಾವು ಅಧಿಕಾರಕ್ಕೆ ಬಂದಾಗ ಮೀಸಲಾತಿಯನ್ನು ರದ್ದು ಮಾಡುವ ಪ್ರಯತ್ನ ಮಾಡುತ್ತೇವೆ ಎಂದು ಅಮೆರಿಕದಲ್ಲಿ ಹೇಳಿಕೆ ನೀಡಿದ್ದಾರೆ ಎಂದು ಆಕ್ಷೇಪಿಸಿದರು.

ಕಾಂಗ್ರೆಸ್ ಪಕ್ಷ ದಲಿತ ವಿರೋಧಿಯಾಗಿತ್ತು; ಮೀಸಲಾತಿಯ ವಿರೋಧಿಯಾಗಿತ್ತು. ಆದರೆ, ವೋಟ್ ಬ್ಯಾಂಕಿಗಾಗಿ ಅವರು ತಾವು ಮೀಸಲಾತಿ, ಸಂವಿಧಾನದ ಪರ ಎಂದಿದ್ದರು ಎಂದು ನುಡಿದರು. ರಾಹುಲ್ ಗಾಂಧಿಯವರು ಹೋದಲ್ಲೆಲ್ಲ ಕೈಯಲ್ಲಿ ಹಿಡಿದ ಕೆಂಪು ಪುಸ್ತಕವನ್ನು ನಾವು ಬೈಬಲ್ ಅಂದುಕೊಂಡಿದ್ದೆವು. ಅದು ಸಂವಿಧಾನ ಎಂದರು. ನಾವು ದಲಿತ ಸಮುದಾಯದವರೆಲ್ಲ ಒಟ್ಟಾಗಿದ್ದೇವೆ. ಈಗ ಆ ಪುಸ್ತಕ ಅಲ್ಲಾಡಿಸಲಿ ಎಂದು ಸವಾಲು ಹಾಕಿದರು.

ಮೀಸಲಾತಿ ತೆಗೆಯಿರಿ ಬನ್ನಿ ನೋಡೋಣ. ನಿಮಗೆ ತಾಕತ್ತಿದ್ದರೆ ಮೀಸಲಾತಿ ತೆಗೆಯಿರಿ ನೋಡೋಣ. ನಮ್ಮ ಪಕ್ಷದ ವಿರುದ್ಧ ಗೂಬೆ ಕೂರಿಸುತ್ತಿದ್ದೀರಲ್ಲವೇ? ಎಂದ ಅವರು, ಬಿಜೆಪಿ  ಮೀಸಲಾತಿ ವಿರೋಧಿಯಲ್ಲ; ಅದನ್ನು ರದ್ದು ಮಾಡುವ ಪ್ರಶ್ನೆಯೇ ಇಲ್ಲ ಎಂದು ಸ್ಪಷ್ಟಪಡಿಸಿದರು.

ದಲಿತರ ಮೀಸಲಾತಿ ಪ್ರಮಾಣವನ್ನು ಹೆಚ್ಚಿಸಿದ್ದು ನಾವು. ದಲಿತರ ಸಬಲೀಕರಣಕ್ಕೆ ನಾವು ಶಕ್ತಿ ತುಂಬಿದ್ದೇವೆ. ನೀವು ಎಸ್‍ಇಪಿ, ಟಿಎಸ್‍ಪಿ ಹಣ ಹೆಚ್ಚು ಕೊಟ್ಟದ್ದಾಗಿ ಹೇಳಿದಿರಿ. ಒಂದು ಕಡೆ ಲೆಕ್ಕ ತೋರಿಸಿ ಇನ್ನೊಂದು ಕಡೆ ಅದನ್ನೆಲ್ಲ ಕಿತ್ತುಕೊಂಡಿದ್ದೀರಿ ಎಂದು ಆಕ್ಷೇಪಿಸಿದರು.
 
 
 
 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ