ಬೆಲೆ ಏರಿಕೆಯೇ ಬಂಡವಾಳ, ರಾಜ್ಯ ಕಾಂಗ್ರೆಸ್ ಸರ್ಕಾರಕ್ಕೆ ಆಳುವ ಯೋಗ್ಯತೆಯೇ ಇಲ್ಲ

Krishnaveni K

ಮಂಗಳವಾರ, 25 ಜೂನ್ 2024 (14:16 IST)
ಬೆಂಗಳೂರು: ನಂದಿನಿ ಹಾಲಿನ ಬೆಲೆ ಏರಿಕೆಯಾದ ಬೆನ್ನಲ್ಲೇ ರಾಜ್ಯ ಬಿಜೆಪಿ ಕಾಂಗ್ರೆಸ್ ನೇತೃತ್ವದ ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ನಿಮಗೆ ಆಳುವ ಯೋಗ್ಯತೆಯೇ ಇಲ್ಲ ಎಂದು ಬಿಜೆಪಿ ಜರೆದಿದೆ.

ನಂದಿನಿ ಹಾಲಿನ ದರ ಏರಿಕೆ ಮಾಡುತ್ತಿದ್ದಂತೇ ಸೋಷಿಯಲ್ ಮೀಡಿಯಾದಲ್ಲಿ ವಾಗ್ದಾಳಿ ನಡೆಸಿರುವ ಕರ್ನಾಟಕ ಬಿಜೆಪಿ ಹಾಲು ಉತ್ಪಾದಕರಿಗೆ ಹಾಲಾಹಲ ನೀಡಿದ್ದ ನೀವು, ಈಗ ಗ್ರಾಹಕರಿಗೆ ವಿಷವುಣಿಸುತ್ತಿದ್ದೀರಿ ಎಂದು ಆಕ್ರೋಶ ವ್ಯಕ್ತಪಡಿಸಿದೆ. ಹಾಲು ಉತ್ಪಾದಕರಿಗೆ ಸಬ್ಸಿಡಿ ನೀಡದೇ ಭಂಡತನ ಮಾಡಿರುವ ಸರ್ಕಾರ ಈಗ ಏಕಾಏಕಿ ಹಾಲಿನ ದರವನ್ನು 2.10 ರೂ.ಗೆ ಏರಿಸಿ ಗಾಯದ ಮೇಲೆ ಬರೆ ಎಳೆಯುತ್ತಿದೆ ಎಂದಿದೆ.

‘ಸಿಎಂ ಸಿದ್ದರಾಮಯ್ಯನವರೇ ಹಾಲು ಉತ್ಪಾದಕರಿಗೆ 1087 ಕೋಟಿ ರೂ. ಸಬ್ಸಿಡಿ ಹಣವನ್ನು ನೀಡದೇ ಬಾಕಿ ಉಳಿಸಿಕೊಂಡಿರುವ ನೀವು ಈಗ  ಗ್ರಾಹಕರಿಗೆ ಬೆಲೆಯೇರಿಕೆ ಶಿಕ್ಷೆ ನೀಡಿರುವುದು ಯಾವ ಪುರುಷಾರ್ಥಕ್ಕೆ. ನಿಮ್ಮದು ಕೇವಲ ರೈತ ವಿರೋಧಿ ಸರ್ಕಾರ ಮಾತ್ರವಲ್ಲ, ನಿಮ್ಮದು ಜನ ವಿರೋಧಿ ಸರ್ಕಾರವೂ ಹೌದು. ಬೆಲೆ ಏರಿಕೆಯನ್ನೇ ಬಂಡವಾಳವನ್ನಾಗಿಸಿಕೊಂಡಿರುವ ನೀವು ಆಳಲು ಯೋಗ್ಯರಲ್ಲ ಎಂಬುದಂತೂ ಸಾಭೀತಾಗಿದೆ, ಜನ ತಾಳ್ಮೆ ಕಳೆದುಕೊಳ್ಳುವ ಮೊದಲು ಕುರ್ಚಿ ಬಿಟ್ಟು ತೊಲಗಿ’ ಎಂದು ಬಿಜೆಪಿ ವಾಗ್ದಾಳಿ ನಡೆಸಿದೆ.

ಇತ್ತೀಚೆಗೆ ರಾಜ್ಯ ಸರ್ಕಾರ ಸುಂಕ ಹೆಚ್ಚಿಸಿ ಪೆಟ್ರೋಲ್-ಡೀಸೆಲ್ ಬೆಲೆ ಏರಿಕೆ ಮಾಡಿದಾಗ ರಾಜ್ಯ ಬಿಜೆಪಿ ಘಟಕ ಭಾರೀ ಪ್ರತಿಭಟನೆ ನಡೆಸಿತ್ತು. ಅದರ ಬೆನ್ನಲ್ಲೇ ಈಗ ಮಧ್ಯಮ ವರ್ಗದವರಿಗೆ ಬರೆ ಎಳೆಯುವಂತೆ ಹಾಲಿನ ದರ ಏರಿಕೆ ಮಾಡಿರುವುದು ವಿಪಕ್ಷಗಳ ಕೆಂಗಣ್ಣಿಗೆ ಗುರಿಯಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ