ನಂದಿನಿ ಹಾಲಿನ ದರ ದಿಡೀರ್ ಏರಿಕೆ: ಪೆಟ್ರೋಲ್, ಡೀಸೆಲ್ ಬಳಿಕ ಈಗ ಹಾಲಿನ ದರ ಏರಿಕೆ ಬಿಸಿ

Krishnaveni K

ಮಂಗಳವಾರ, 25 ಜೂನ್ 2024 (12:37 IST)
ಬೆಂಗಳೂರು: ಈಗಾಗಲೇ ಪೆಟ್ರೋಲ್-ಡೀಸೆಲ್ ದರ ಏರಿಕೆ ಬಿಸಿಯಿಂದ ತತ್ತರಿಸಿರುವ ಜನಕ್ಕೆ ಈಗ ನಂದಿನಿ ಹಾಲು ದರ ಏರಿಕೆ ಬರೆ ಸಿಕ್ಕಿದೆ. ನಾಳೆಯಿಂದಲೇ ಹೊಸ ದರ ಜಾರಿಗೆ ಬರಲಿದೆ ಎಂದು ಕೆಎಂಎಫ್ ತಿಳಿಸಿದೆ.

ಲೋಕಸಭೆ  ಚುನಾವಣೆ ಮುಗಿಯುತ್ತಲೇ ಒಂದೊಂದೇ ಬೆಲೆ ಏರಿಕೆಯಾಗುತ್ತಿದೆ. ಮೊನ್ನೆಯಷ್ಟೇ ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಸುಂಕ ಹೆಚ್ಚಿಸಿ ರಾಜ್ಯ ಸರ್ಕಾರ ಬೆಲೆ ಏರಿಕೆಗೆ ಕಾರಣವಾಗಿತ್ತು. ಈ ಬಗ್ಗೆ ವಿಪಕ್ಷಗಳಿಂದ ಭಾರೀ ವಿರೋಧ ವ್ಯಕ್ತವಾಗಿತ್ತು. ಆದರೆ ಇದಕ್ಕೆ ರಾಜ್ಯ ಸರ್ಕಾರ ಸೊಪ್ಪೇ ಹಾಕಿರಲಿಲ್ಲ.

ಈಗ ನಂದಿನಿ ಹಾಲಿನ ದರ ಏರಿಕೆಯಾಗಿದೆ. ಲೀಟರ್ ಗೆ 42 ರೂ. ಇದ್ದ ಹಾಲಿನ ಬೆಲೆ 2 ಲೀಟರ್ ಹೆಚ್ಚಳ ಮಾಡಲಾಗಿದೆ. ಜೊತೆಗೆ ಒಂದು ಲೀಟರ್ ಪ್ಯಾಕೆಟ್ ನಲ್ಲಿ 50 ಎಂಎಲ್ ಹಾಲು ಹೆಚ್ಚುವರಿಯಾಗಿ ನೀಡಲಾಗುವುದು ಎಂದು ಕೆಎಂಎಫ್ ಅಧ್ಯಕ್ಷ ಭೀಮಾನಾಯ್ಕ್ ತಿಳಿಸಿದ್ದಾರೆ. ಆದರೆ ಮೊಸರು ಹಾಗೂ ಇತರ ಉತ್ಪನ್ನಗಳ ದರದಲ್ಲಿ ಸದ್ಯಕ್ಕೆ ಏರಿಕೆ ಮಾಡಲಾಗಿಲ್ಲ.

ಈಗಾಗಲೇ ಅಕಾಲಿಕ ಮಳೆಯಿಂದಾಗಿ ತರಕಾರಿ ಬೆಲೆ ಗಗನಕ್ಕೇರಿದೆ. ಜೊತೆಗೆ ಪೆಟ್ರೋಲ್ ಬೆಲೆಯೂ ಏರಿಕೆಯಾಗಿದೆ. ಈ ಬೆಲೆ ಏರಿಕೆ ಹೊರೆ ಮಧ್ಯಮ ವರ್ಗದವರನ್ನು ಬಹುವಾಗಿ ಕಾಡಲಿದೆ. ಬೇರೆ ರಾಜ್ಯಗಳಿಗೆ ಹೋಲಿಸಿದರೆ ನಮ್ಮ ರಾಜ್ಯದಲ್ಲಿ ಹಾಲಿನ ದರ ಕಡಿಮೆಯಿದೆ. ಈಗ ಬೆಲೆ ಏರಿಕೆ ಮಾಡಿದರೂ ಗುಜರಾತ್ ನ ಅಮೂಲ್, ಕೇರಳದ ಮಿಲ್ಮಾ ದರಕ್ಕೆ ಹೋಲಿಸಿದರೆ ನಮ್ಮ ರಾಜ್ಯದ ನಂದಿನಿ ಹಾಲಿನ ದರ ಕಡಿಮೆ ಎಂದು ಭೀಮಾನಾಯ್ಕ್ ಸಮಜಾಯಿಷಿ ನೀಡಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ