ಬೆಂಗಳೂರು: ಮುಂಬರುವ ಲೋಕಸಭೆ ಚುನಾವಣೆಗೆ ಕಾಂಗ್ರೆಸ್ ಇಂದು ಅಭ್ಯರ್ಥಿಗಳ ಎರಡನೇ ಪಟ್ಟಿಯನ್ನು ಪ್ರಕಟಿಸುತ್ತಿದೆ. ಈ ಪಟ್ಟಿಯಲ್ಲಿ ಶಾಸಕರು, ಸಚಿವರ ಮಕ್ಕಳಿಗೆ ಸ್ಥಾನ ಸಿಕ್ಕಿದೆ ಎನ್ನಲಾಗಿದೆ.
ನಿನ್ನೆ ದೆಹಲಿಯಲ್ಲಿ ನಡೆದ ಸಿಇಸಿ ಸಭೆಯಲ್ಲಿ ಮಲ್ಲಿಕಾರ್ಜುನ ಖರ್ಗೆ, ಸಿಎಂ ಸಿದ್ದರಾಮಯ್ಯ ಸೇರಿದಂತೆ ಘಟಾನುಘಟಿ ನಾಯಕರು ಭಾಗಿಯಾಗಿ ಕಾಂಗ್ರೆಸ್ ಎರಡನೇ ಪಟ್ಟಿ ಅಂತಿಮಗೊಳಿಸಿದ್ದಾರೆ. ಈ ಪಟ್ಟಿಯಲ್ಲಿ 17 ಅಭ್ಯರ್ಥಿಗಳ ಪಟ್ಟಿ ಫೈನಲ್ ಮಾಡಲಾಗಿದೆ. ಇನ್ನುಳಿದ ನಾಲ್ಕು ಅಭ್ಯರ್ಥಿಗಳ ಆಯ್ಕೆ ಇನ್ನೂ ಬಾಕಿಯಿದೆ.
ಇದೀಗ ಮೈಸೂರು, ಚಿಕ್ಕಮಗಳೂರು, ಕಲಬುರಗಿ ಸೇರಿದಂತೆ ಪ್ರಮುಖ ಕ್ಷೇತ್ರಗಳಿಗೆ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಲಾಗುತ್ತದೆ. ಈ ಪೈಕಿ ಕಲಬುರಗಿಯಲ್ಲಿ ಮಲ್ಲಿಕಾರ್ಜುನ ಖರ್ಗೆ ಅಳಿಯ, ಬೆಳಗಾವಿಯಲ್ಲಿ ಲಕ್ಷ್ಮೀ ಹೆಬ್ಬಾಳ್ಕರ್ ಪುತ್ರಿ, ಬೆಂಗಳೂರು ದಕ್ಷಿಣಕ್ಕೆ ರಾಮಲಿಂಗಾ ರೆಡ್ಡಿ ಪುತ್ರಿ ಸ್ಪರ್ಧಿಸುವುದು ಬಹುತೇಕ ಪಕ್ಕಾ ಎನ್ನಲಾಗಿದೆ.
ಇದೀಗ ಬೆಂಗಳೂರು ಉತ್ತರ, ಉತ್ತರ ಕನ್ನಡ, ಹುಬ್ಬಳ್ಳಿ-ಧಾರವಾಡ, ಬಳ್ಳಾರಿ ಕ್ಷೇತ್ರದ ಟಿಕೆಟ್ ಫೈನಲ್ ಆಗಬೇಕಿದೆ. ಇಂದು ಎರಡನೇ ಪಟ್ಟಿಯನ್ನು ಘೋಷಣೆ ಮಾಡುತ್ತಿರುವುದಾಗಿ ಸ್ವತಃ ಸಿದ್ದರಾಮಯ್ಯ ಹೇಳಿದ್ದಾರೆ. ಇದಕ್ಕೆ ಮೊದಲು ಕರ್ನಾಟಕ 7 ಕ್ಷೇತ್ರಗಳಿಗೆ ಸ್ಪರ್ಧಿಗಳ ಹೆಸರು ಘೋಷಣೆ ಮಾಡಲಾಗಿತ್ತು.