ಕರ್ನಾಟಕ ಎಸ್ಎಸ್ಎಲ್ ಸಿ ಪರೀಕ್ಷೆ ಫಲಿತಾಂಶ ಪ್ರಕಟ

Krishnaveni K

ಗುರುವಾರ, 9 ಮೇ 2024 (10:57 IST)
ಬೆಂಗಳೂರು:  ಈ ಸಾಲಿನ ಕರ್ನಾಟಕ ಎಸ್ಎಸ್ಎಲ್ ಸಿ ಪರೀಕ್ಷೆ ಫಲಿತಾಂಶ ಪ್ರಕಟವಾಗಿದ್ದು 631204 ವಿದ್ಯಾರ್ಥಿಗಳು ಪಾಸಾಗಿದ್ದು ಶೇ. 76.91 ರಷ್ಟು ಫಲಿತಾಂಶ ಬಂದಿದೆ.

ಮಾರ್ಚ್ 25 ರಿಂದ ಏಪ್ರಿಲ್ 6 ರವರೆಗೆ ಕರ್ನಾಟಕ ಎಸ್ಎಸ್ಎಲ್ ಸಿ ಪರೀಕ್ಷೆಗಳು ನಡೆದಿತ್ತು.ಈ ಬಾರಿ ಒಟ್ಟು 8.69 ಲಕ್ಷ ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದರು. ಈ ಪೈಕಿ 4,41,910 ಬಾಲಕರು ಮತ್ತು 4,28,058 ವಿದ್ಯಾರ್ಥಿನಿಯರು ಸೇರಿದ್ದಾರೆ. ಇವರೆಲ್ಲರ ಭವಿಷ್ಯ ಇಂದು ಬಯಲಾಗಿದೆ.

ಆನ್ ಲೈನ್ ಮೂಲಕವೂ ಪರೀಕ್ಷೆ ಫಲಿತಾಂಶ ವೀಕ್ಷಿಸಬಹುದಾಗಿದ್ದು ಇದಕ್ಕಾಗಿ ಶಿಕ್ಷಣ ಇಲಾಖೆ ಎರಡು ವೆಬ್ ತಾಣಗಳ ವಿಳಾಸ ನಿಗದಿಪಡಿಸಿದೆ. karresults.nic.in ಮತ್ತು kseab.karnataka.gov.in ಎಂಬ ವೆಬ್ ಸೈಟ್ ನಲ್ಲಿ ಫಲಿತಾಂಶ ವೀಕ್ಷಿಸಬಹುದಾಗಿದೆ. ಆನ್ ಲೈನ್ ನಲ್ಲಿ ಫಲಿತಾಂಶ ವೀಕ್ಷಿಸಲು ನಿಮ್ಮ ಅಪ್ಲಿಕೇಷನ್ ಸಂಖ್ಯೆ, ಜನ್ಮದಿನಾಂಕ ಬೇಕಾಗುತ್ತದೆ.

ಪಿಯುಸಿಯಂತೇ ಎಸ್ಎಸ್ಎಲ್ ಸಿ ಪಾಸಾದವರಿಗೂ ಅಂಕ ಹೆಚ್ಚಿಸಿಕೊಳ್ಳಬೇಕೆಂದರೆ ಪರೀಕ್ಷೆ 2, ಪರೀಕ್ಷೆ 3 ಬರೆಯಬಹುದಾಗಿದೆ.  ಪಾಸಾಗಲಿ ಅಥವಾ ಫೇಲಾಗಲಿ ಒಟ್ಟು ಮೂರು ಬಾರಿ ಪರೀಕ್ಷೆ ಬರೆಯಲು ಅವಕಾಶವಿದೆ. ಹೀಗಾಗಿ ಇಂದು ಫೇಲ್ ಆದವರು ಆತಂಕ ಪಡಬೇಕಾದ ಅಗತ್ಯವಿಲ್ಲ.

ಈ ಬಾರಿಯೂ ಬಾಲಕಿಯರೇ ಮೇಲುಗೈ ಸಾಧಿಸಿದ್ದಾರೆ. ಉಡುಪಿ ಜಿಲ್ಲೆ ಪ್ರಥಮ ಸ್ಥಾನ ಪಡೆದರೆ ಯಾದಗಿರಿ ಜಿಲ್ಲೆ ಕೊನೆಯ ಸ್ಥಾನದಲ್ಲಿದೆ. ಬಾಗಲಕೋಟೆಯ ಅಂಕಿತಾ 625 ಕ್ಕೆ 625 ಅಂಕ ಪಡೆದ ಏಕೈಕ ವಿದ್ಯಾರ್ಥಿನಿಯಾಗಿದ್ದಾಳೆ. ವಿಶೇಷವೆಂದರೆ ಗ್ರಾಮೀಣ ವಿದ್ಯಾರ್ಥಿಗಳೇ ಹೆಚ್ಚು ಸಂಖ್ಯೆಯಲ್ಲಿ ಪಾಸಾಗಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ