ಕಣ್ಣು ಕೋರೈಸೋ ಪ್ರವಾಸಿ ತಾಣಗಳಿಗೇನು ಕೊರತೆ ಇಲ್ಲ. ಹಿಡಿದ ದಾರಿಯಲ್ಲೆಲ್ಲಾ ಒಂದೊಂದು ಸುಮಧುರ ತಾಣಗಳು. ಅದ್ರಲ್ಲೂ ಮಲೆನಾಡಿನ ಸುತ್ತಮುತ್ತಲಿರೋ ಝರಿ, ಜಲಪಾತಗಳಂತೂ ನೋಡುಗನ ಮನಸ್ಸಿನ ಭಾವನೆಗಳಿಗೆ ಜೀವ ತುಂಬಲಿವೆ. ಅದೇ ರೀತಿ ಪ್ರವಾಸಿ ತಾಣಗಳ ಪಟ್ಟಿಗೆ ಸೇರೋ ಕುಮಾರಗಿರಿ ಪಾಲ್ಸ್ ಟ್ರಕ್ಕಿಂಗ್ ಪ್ರಿಯರಿಗೆ ಹೇಳಿ ಮಾಡಿಸಿದ ಸ್ಥಳವಾಗಿದೆ.
ಚಿಕ್ಕಮಗಳೂರಿನಲ್ಲಿ ಕುಮಾರಗಿರಿ ಪಾಲ್ಸ್ ಕಣ್ಮನ ಸೆಳೆಯುತ್ತಿದೆ. ಕಲ್ಲುಬಂಡೆಗಳ ಮಧ್ಯೆಯಲ್ಲಿ ಹರಿಯುತ್ತಿರೋ ಜಲಪಾತ, ಪಾಲ್ಸ್ ಮುಂದೆ ನಿಂತು ಸೆಲ್ಫಿ ಕ್ಲಿಕಿಸುತ್ತಿರೋ ಪ್ರವಾಸಿಗರು ಸಂಭ್ರಮಿಸುತ್ತಿದ್ದಾರೆ.
ಚಿಕ್ಕಮಗಳೂರು ತಾಲೂಕಿನ ಕಾಮೇನಹಳ್ಳಿ ಸಮೀಪದ ಕುಮಾರಗಿರಿ ಜಲಪಾತದಲ್ಲಿ 40 ರಿಂದ 50 ಅಡಿ ಎತ್ತರದಿಂದ ಬೀಳೋ ಗಂಗೆಗೆ ಪ್ರವಾಸಿಗರನ್ನು ಹಿಡಿದಿಟ್ಟುಕೊಳ್ಳೊ ತಾಕತ್ತಿದೆ. ಒಮ್ಮೆ ಈ ಸ್ಥಳಕ್ಕೆ ತೆರಳಿದ್ರೆ ಸಾಕು ಆಯಾಸವೆಲ್ಲಾ ಮಾಯವಾಗಿ ಉಲ್ಲಾಸ ಮೂಡುತ್ತೆ. ಕಪ್ಪು ಬಂಡೆಗಳ ನಡುವೆ ಹಾಲು ನೊರೆಯಂತೆ ಧುಮ್ಮುಕ್ಕುವ ಮನಮೋಹಕ ಜಲಪಾತದ ದೃಶ್ಯ ಕಾವ್ಯವನ್ನು ವರ್ಣಿಸಲು ಅಸಾಧ್ಯ. ಬೃಹತ್ ಬಂಡೆಗಳಿಂದ ಸಣ್ಣಪುಟ್ಟ ಬಂಡೆಗಳ ಮಧ್ಯೆಯೂ ಸಣ್ಣ ಸಣ್ಣ ಜಲಪಾತಗಳನ್ನು ಸೃಷ್ಟಿಸಿಕೊಂಡು ನಂತರ ಸುಮಾರು 50 ಅಡಿ ಎತ್ತರದಿಂದ ಈ ಜಲಪಾತ ಧುಮ್ಮಿಕ್ಕಿ ಹರಿಯುತ್ತದೆ. ನಂತರ ಇದು ಮುಂದೆ ಹಳ್ಳವಾಗಿ ಹರಿದು ಐತಿಹಾಸಿಕ ಅಯ್ಯನಕೆರೆ ಸೇರಿಕೊಳ್ಳುತ್ತದೆ. ಈ ಪಾಲ್ಸ್ ಗೆ ದಾರಿ ವ್ಯವಸ್ಥೆ ಕಲ್ಪಿಸಿದ್ರೆ ಪ್ರವಾಸಿಗರ ಸಂಖ್ಯೆ ಹೆಚ್ಚಾಗುತ್ತೆ ಅಂತಾರೆ ಪ್ರವಾಸಿಗರು.