ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಪೂರ್ವ ಪ್ರಾಥಮಿಕ ಶಾಲಾ ತರಗತಿಗಳು( LKG, UKG) ಆರಂಭ
ಶುಕ್ರವಾರ, 24 ಡಿಸೆಂಬರ್ 2021 (20:35 IST)
ಕುಶಾಲನಗರ, ಕೊಡಗು (22 ನೇ ಡಿಸೆಂಬರ್ 2021) : ಕುಶಾಲನಗರ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯಲ್ಲಿ ಹೊಸ ಶಿಕ್ಷಣ ನೀತಿಯಂತೆ ಶಾಲೆಯಲ್ಲಿ ಆರಂಭಿಸಲಾದ LKG, UKG ತರಗತಿಗಳಿಗೆ ಬುಧವಾರ (ಡಿ.22/12/2021) ರಂದು ವಿದ್ಯುಕ್ತವಾಗಿ ಚಾಲನೆ ನೀಡಲಾಯಿತು.
ಶಾಲೆಯ ಪೂರ್ವ ಪ್ರಾಥಮಿಕ ಶಾಲೆಯ ಪೋಷಕರ ಸಮಿತಿಯ ಅಧ್ಯಕ್ಷ ಎಚ್.ಎಂ.ರಘು ಕೋಟಿ ಅವರ ಅಧ್ಯಕ್ಷತೆಯಲ್ಲಿ ಆರಂಭಗೊಂಡ ತರಗತಿಗಳನ್ನು ನಟಿ, ಚಿಕ್ಕಮಗಳೂರಿನ ಪೂಜಾ ರಮೇಶ್ ಉದ್ಘಾಟಿಸಿದರು.
ಕ್ಷೇತ್ರ ಶಿಕ್ಷಣಾಧಿಕಾರಿ ಎಚ್.ಕೆ.ಪಾಂಡು
ಸರ್ಕಾರಿ ಶಾಲೆಯಲ್ಲಿ ಮಕ್ಕಳಿಗೆ ಇಂಗ್ಲೀಷ್ ಕಲಿಕೆಗೆ ಒತ್ತು ನೀಡುವ ಮೂಲಕ ಅವರಿಗೆ ಉತ್ತಮ ಶಿಕ್ಷಣ ನೀಡಲು ಈ ಶಾಲೆಯಲ್ಲಿ ಉತ್ತಮ ಹೆಜ್ಜೆ ಇಟ್ಟಿದೆ. ಮಕ್ಕಳ ಕಲಿಕೆಗೆ ಎಲ್ಲರೂ ಸಹಕರಿಸಬೇಕೆಂದರು.
ಪ್ರತಿ ಮಗುವಿಗೂ ಉತ್ತಮ ಶಿಕ್ಷಣ ನೀಡಲು ಸರ್ಕಾರಿ ಶಾಲೆಯಲ್ಲಿ ಇಂತಹ ಪೂರ್ವ ಪ್ರಾಥಮಿಕ ಶಾಲೆ ಆರಂಭಿಸಿದ್ದು, ಇಂತಹ ಶಾಲೆಗಳ ಪ್ರಗತಿಗೆ ಪೋಷಕರು ಮತ್ತು ದಾನಿಗಳು ಸಹಕರಿಸಬೇಕು ಎಂದರು.
ಈ ಶಾಲೆಯಲ್ಲಿ ಎಲ್.ಕೆ.ಜಿ.ಮತ್ತು ಯು.ಕೆ.ಜಿ. ಆರಂಭಕ್ಕೆ ಶ್ರಮಿಸಿದ ಎಚ್.ಎಂ.ರಘು ಅವರ ವಿಶೇಷ ಪರಿಶ್ರಮದ ಬಗ್ಗೆ ಬಿಇಓ ಪಾಂಡು ಶ್ಲಾಘಿಸಿದರು.
ತರಗತಿ ಕೊಠಡಿಗಳನ್ನು ಉದ್ಘಾಟಿಸಿದ ನಟಿ ಪೂಜಾ ರಮೇಶ್ ಮಾತನಾಡಿ, ಶಿಕ್ಷಣ ಇಲಾಖೆಯ ಸಹಕಾರ & ರಘು ಅವರ ವಿಶೇಷ ಪರಿಶ್ರಮದಿಂದ ಆರಂಭಗೊಂಡ ಈ ಎಲ್.ಕೆ.ಜಿ.& ಯು.ಕೆ.ಜಿ.ತರಗತಿಗಳ ಮೂಲಕ ಮಕ್ಕಳ ಭವಿಷ್ಯ ಉತ್ತಮಗೊಳ್ಳಲಿ ಎಂದರು.
ಕಾಫಿ ನಾಡಿನ ವೀರ ಸೇನಾನಿಗಳ ನಾಡಿನಲ್ಲಿ ತಾವು ಚಿಕ್ಕ ಮಕ್ಕಳೊಂದಿಗೆ ಭಾಗವಹಿಸಲು ಅವಕಾಶ ಲಭಿಸಿದ್ದಕ್ಕೆ ಕೃತಜ್ಞತೆ ಸಲ್ಲಿಸಿದರು.
ಕೂಡಿಗೆ ಡಯಟ್ ಪ್ರಾಂಶುಪಾಲರಾದ ಕೆ.ವಿ.ಸುರೇಶ್ ಮಾತನಾಡಿ, ಸರ್ಕಾರದ ಇಲ್ಲಿ ಪೂರ್ವ ಪ್ರಾಥಮಿಕ ಶಾಲೆಯು ಆರಂಭಗೊಂಡಿದ್ದು,ಮಕ್ಕಳ ಕಲಿಕೆಯನ್ನು ಉದ್ದೀಪನಗೊಳಿಸಲು ಈ ತರಗತಿಗಳು ಸಹಕಾರಿಯಾಗಿವೆ.
ಪೋಷಕರು ತಮ್ಮ ಮಕ್ಕಳ ಶೈಕ್ಷಣಿಕ ಅಭಿವೃದ್ಧಿಗೆ ಹೆಚ್ಚಿನ ಪ್ರೋತ್ಸಾಹ ಅಗತ್ಯ
ಎಂದರು.
ಅಧ್ಯಕ್ಷತೆ ವಹಿಸಿದ್ದ ಪೋಷಕರ ಸಮಿತಿಯ ಅಧ್ಯಕ್ಷ ಎಚ್.ಎಂ.ರಘು ಮಾತನಾಡಿ, ಸರ್ಕಾರಿ ಶಾಲೆಯಲ್ಲಿ ಎಲ್.ಕೆ.ಜಿ.,ಯು.ಕೆ.ಜಿ. ತರಗತಿಗಳ ಆರಂಭಿಸಲು ಸಹಕರಿಸಿದವರಿಗೆ ಕೃತಜ್ಞತೆ ಸಲ್ಲಿಸಿದರು.
ಪಟ್ಟಣ ಪಂಚಾಯತಿ ಅಧ್ಯಕ್ಷ ಜೈವರ್ಧನ್(ಕೇಶವ) ಮಾತನಾಡಿ, ಈ ಶಾಲೆಯ ಆರಂಭಕ್ಕೆ ಶ್ರಮಿಸಿದ ಬಿಇಓ ಪಾಂಡು ಮತ್ತು ಎಚ್.ಎಂ.ರಘು ಅವರ ಸಾಮಾಜಿಕ ಕಾಳಜಿ ಶ್ಲಾಘನೀಯವಾದುದು ಎಂದರು.
ಸಂಚಾರಿ ಠಾಣೆಯ ಎಸ್.ಐ.ಚಂದ್ರಶೇಖರ್ ಮಾತನಾಡಿ, ಈ ಶಾಲೆಯ ಬೆಳವಣಿಗೆಗೆ ಎಲ್ಲರೂ ಸಹಕರಿಸಬೇಕು ಎಂದರು.
ಸ.ಮಾ.ಪ್ರಾ.ಶಾಲೆಯ ಮುಖ್ಯ ಶಿಕ್ಷಕಿ ಕೆ.ಆರ್.ರಾಣಿ, ಬಾಲಕಿಯರ ಸರ್ಕಾರಿ ಪ್ರೌಢಶಾಲೆಯ ಮುಖ್ಯ ಶಿಕ್ಷಕಿ ಬಿ.ಎನ್.ಪುಷ್ಪ, ಎಸ್.ಡಿ.ಎಂ.ಸಿ.ಅಧ್ಯಕ್ಷ ಆರ್. ಅವಿನಾಶ್, ಎ.ಎಸ್.ಐ.ಗೀತಾ, ಪಿರಿಯಾಪಟ್ಟಣದ ಸಮಾಜ ಸೇವಕಿ ಶುಭ, ಅಜಾದ್ ಮೌಲಾನ ಶಾಲೆಯ ಪ್ರಾಂಶುಪಾಲರಾದ ಶ್ವೇತಾ, ಕೂಡುಮಂಗಳೂರು ಸರ್ಕಾರಿ ಪ್ರೌಢಶಾಲೆಯ ಮುಖ್ಯೋಪಾಧ್ಯಾಯ ಟಿ.ಜಿ.ಪ್ರೇಮಕುಮಾರ್, ಎಲ್.ಕೆ.ಜಿ.,ಯು.ಕೆ.ಜಿ.ತರಗತಿಗಳ ಶಿಕ್ಷಕಿಯರಾದ
ಅರ್ಚನ , ಜ್ಯೋತಿ, ಕಲಾವಿದರಾದ ಟಿ.ಆರ್.ಪ್ರಭುದೇವ್, ಆರ್.ರವಿ, ಶಿಕ್ಷಕರು, ಪೋಷಕರು ಇದ್ದರು.
ಬಾಲಕಿಯರ ಸರ್ಕಾರಿ ಪ್ರೌಢಶಾಲೆಯ ಶಿಕ್ಷಕ ಕೆ.ಸಿ.ಶಿವಣ್ಣ ಕಾರ್ಯಕ್ರಮ ನಿರ್ವಹಿಸಿದರು.
ಸನ್ಮಾನ : -ಇದೇ ವೇಳೆ ಈ ಶಾಲೆಯಲ್ಲಿ ಎಲ್.ಕೆ.ಜಿ.,ಮತ್ತು ಯು.ಕೆ.ಜಿ.ತರಗತಿಗಳನ್ನು ಆರಂಭಿಸಲು ಕಾರಣಕರ್ತರಾದ ಬಿಇಓ ಎಚ್.ಕೆ.ಪಾಂಡು, ಪೋಷಕರ ಸಮಿತಿಯ ಅಧ್ಯಕ್ಷ ಎಚ್.ಎಂ.ರಘು ಕೋಟಿ ಹಾಗೂ ಮಕ್ಕಳಿಗೆ ಸಮವಸ್ತ್ರಗಳ ದಾನಿಯೂ ಆದ ನಟಿ ಪೂಜಾ ರಮೇಶ್ ಅವರನ್ನು ಪೋಷಕರ ಸಮಿತಿಯ ವತಿಯಿಂದ ಆತ್ಮೀಯವಾಗಿ ಸನ್ಮಾನಿಸಲಾಯಿತು.
ಮಕ್ಕಳೊಂದಿಗೆ ಬೆರೆತ ನಟಿ : ಪೂರ್ವ ಪ್ರಾಥಮಿಕ ಶಾಲೆಯ ಎಲ್.ಕೆ.ಜಿ ಮತ್ತು ಯು.ಕೆ.ಜಿ. ತರಗತಿಯ ಆರಂಭೋತ್ಸವಕ್ಕೆ ಆಗಮಿಸಿದ್ದ ನಟಿ ಪೂಜಾ ರಮೇಶ್ ಅವರು ಶಾಲೆಯ ಚಿಕ್ಕ ಮಕ್ಕಳೊಂದಿಗೆ ಬೆರೆತು ಅವರ ಕುಶಲೋಪರಿ, ಯೋಗಕ್ಷೇಮ ಹಾಗೂ ಕಲಿಕೆ ಕುರಿತು ಚರ್ಚಿಸಿದರು. ಮಕ್ಕಳು ಮುಗಿದು ನಟಿ ಪೂಜಾ ಅವರಿಂದ ಹಸ್ತಾಕ್ಷರ ಪಡೆದು ಖುಷಿಪಟ್ಟರು.